ಸಾರಾಂಶ
ಇತಿಹಾಸ ನೋಡಿದಾಗ ಬಿಜೆಪಿ ಮೊದಲಿನಿಂದಲೂ ಮೀಸಲಾತಿ ವಿರದ್ಧವಾಗಿಯೇ ಇದೆ. ಇದಕ್ಕೆ ಉದಾಹರಣೆಯೆಂದರೆ, ಅಂದಿನ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯೀಸರು ಮೀಸಲಾತಿ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅಫಡವಿಟ್ ಸಲ್ಲಿಸಿದ್ದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಕಾಂಗ್ರೆಸ್ ಪಕ್ಷವು ದಲಿತರಿಗೆ ಹಾಗೂ ಹಿಂದುಳಿದವರಿಗೆ ಕೊಡುವ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂಬುದಾಗಿ ಬಿಜೆಪಿ ಸುಳ್ಳು ಹೇಳುತ್ತಿದೆ. ಬಿಜೆಪಿ ಮೀಸಲಾತಿ ಪರ ಇಲ್ಲ ಎಂದು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಇತಿಹಾಸ ನೋಡಿದಾಗ ಬಿಜೆಪಿ ಮೊದಲಿನಿಂದಲೂ ಮೀಸಲಾತಿ ವಿರದ್ಧವಾಗಿಯೇ ಇದೆ. ಇದಕ್ಕೆ ಉದಾಹರಣೆಯೆಂದರೆ, ಅಂದಿನ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯೀಸರು ಮೀಸಲಾತಿ ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅಫಡವಿಟ್ ಸಲ್ಲಿಸಿದ್ದರು ಎಂದು ಹೇಳಿದ್ದಾರೆ.ಯಾದಗಿರಿಯಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಮೀಸಲಾತಿ ಕಳೆದ 30 ವರ್ಷಗಳಿಂದ ಇದೆ. ಚಿನ್ನಪ್ಪರೆಡ್ಡಿ ವರದಿ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ. ಬೊಮ್ಮಾಯಿ ಸರ್ಕಾರದಲ್ಲಿ ಅದನ್ನು ರದ್ದು ಮಾಡಿದ್ದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದಾಗ, ಇದೇ ಬೊಮ್ಮಾಯಿ ಅವರು ಕೋರ್ಟಿಗೆ ಅಫಡವಿಟ್ ಹಾಕಿ ಮುಸ್ಲಿಮರಿಗೆ ಮೀಸಲಾತಿ ಮುಂದುವರಿಸುವುದಾಗಿ ಹೇಳಿದ್ದರು. ಪ್ರಧಾನಿ ಈ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದರು.ಕರ್ನಾಟಕ ಪ್ರತಿನಿಧಿಸಿದ್ದ 25 ಬಿಜೆಪಿ ಸಂಸದರು ರಾಜ್ಯಕ್ಕೆ ಅನ್ಯಾಯ ಆದಾಗ ಒಂದು ದಿನವೂ ಕೇಂದ್ರದಲ್ಲಿ ದನಿ ಎತ್ತಲಿಲ್ಲ. ರೈತರ, ದಮನಿತರ, ಮಹಿಳೆಯರ ಬಗ್ಗೆ ಮಾತನಾಡಲೇ ಇಲ್ಲ. ಬರ ಪರಿಹಾರ ಕೇಳಲೂ ಇಲ್ಲ. ಈಗ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ನಂತರ ಪರಿಹಾರ, ಅದೂ ಕಡಮೆ ಪರಿಹಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ, ದೇಶ ಒಗ್ಗೂಡಿಸುವ ರಾಹುಲ್ ಗಾಂಧಿ ಹಾಗೂ ಖರ್ಗೆಯವರ ಕೈ ಬಲಪಡಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.