ಸಿದ್ದಾಪುರ: ಎಸ್‌ ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ವಾಸ ದೃಢೀಕರಣ ಪತ್ರ ನೀಡುವ ನೀತಿ ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ಮತದಾರರ ನೋಂದಣಾಧಿಕಾರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದರು.ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕೆಲವರು ಬಿಎಲ್‌ಒಗಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಮತದಾರರ ಪರಿಶೀಲನೆ ಸಮರ್ಪಕವಾಗಿ ನಡೆಯಲು ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ರಾಜ್ಯ ಸರ್ಕಾರ ವಾಸ ದೃಢೀಕರಣ ಪತ್ರ ನೀಡುವ ತೀರ್ಮಾನವು ನಿಯಮಬಾಹಿರವಾಗಿದ್ದು, ಇದನ್ನು ಪರಿಗಣಿಸಬಾರದು ಎಂದು ಬಿಜೆಪಿ ಮುಖಂಡರು ತಮ್ಮ ಮನವಿಯಲ್ಲಿ ಒತ್ತಾಯಿಸಿದರು.

ಜಿಲ್ಲಾ ಉಪಾಧ್ಯಕ್ಷ ಕಿಲನ್ ಗಣಪತಿ, ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಯಮುನಾ ಚಂಗಪ್ಪ ಹಾಗೂ ಕಬೀರ್ ದಾಸ್ ಮತ್ರಂಡ ಅವರು ಮತದಾರರ ನೋಂದಣಾಧಿಕಾರಿ ಆರ್. ಮಂಜುನಾಥ್ ಅವರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದರು. ಬಿಜೆಪಿ ಮುಖಂಡ ಕಿಲನ್ ಗಣಪತಿ ಎಸ್ ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನಿಗದಿಪಡಿಸಿರುವ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಮಾತ್ರ ಚುನಾವಣಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಜ್ಯ ಸರ್ಕಾರ ಅಥವಾ ಇತರ ಯಾವುದೇ ಸಂಸ್ಥೆಗಳು ನೀಡುವ ನಿರ್ದೇಶನಗಳನ್ನು ಪರಿಗಣಿಸಬಾರದು. ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕ, ನಿಷ್ಪಕ್ಷಪಾತ ಹಾಗೂ ಚುನಾವಣಾ ಆಯೋಗದ ನಿಯಮಾವಳಿಗಳ ಅನುಸಾರ ನಡೆಯಬೇಕು ಎಂದು ಆಗ್ರಹಿಸಿದರು.