ಕನ್ನಡಪ್ರಭ ವಾರ್ತೆ ಮಡಿಕೇರಿ

ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಿಗದಿಯಾಗಿರುವ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಅವರ 15 ಅಂಶದ ಕಾರ್ಯಕ್ರಮಗಳ ಕುರಿತು ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಅರ್ಹರಿಗೆ ತಲುಪಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಕಾಲದಲ್ಲಿ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಅಲ್ಪಸಂಖ್ಯಾತರಿಗಾಗಿ ಅಂಗನವಾಡಿ, ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿ ಜೊತೆಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಜೊತೆಗೆ ನಿವೇಶನ ಇಲ್ಲದಿದ್ದಲ್ಲಿ ಕೂಡಲೇ ಮಾಹಿತಿಯ ಪ್ರಸ್ತಾವನೆ ಸಲ್ಲಿಸುವಂತೆ ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಕಾರ್ಯಕ್ರಮ ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಕಾರ್ಯಕ್ರಮ ತಲುಪಿಸುವಲ್ಲಿ ಅಧಿಕಾರಿಗಳು ಇನ್ನಷ್ಟು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಖಲೀದ್ ಅವರು ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಎಮ್ಮೆಮಾಡು ಶಾಲೆ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿಯಿಂದ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸಮಿತಿ ಸದಸ್ಯರಾದ ಖಾಲೀದ್ ಅವರು ಹಾಕತ್ತೂರು ಶಾಲೆ ಅಭಿವೃದ್ಧಿ, ಕೊಡ್ಲಿಪೇಟೆ ವಸತಿ ಶಾಲೆಗಳಿಗೆ ಮತ್ತಷ್ಟು ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಕೋರಿದರು. ಕೃಷಿ ಇಲಾಖೆಯಿಂದ ಒದಗಿಸಲಾಗುವ ಕೃಷಿ ಹೊಂಡವನ್ನು ಎಲ್ಲೆಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿಯ ಪಟ್ಟಿ ಒದಗಿಸಬೇಕು. ಇದರಲ್ಲಿ ಅಲ್ಪಸಂಖ್ಯಾತರ ಕುಟುಂಬದವರು ಎಷ್ಟು ಮಂದಿ ಇದ್ದಾರೆ. ಈ ಬಗ್ಗೆ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಮತ್ತೊಬ್ಬ ಸಮಿತಿ ಸದಸ್ಯರಾದ ಇಸ್ಮಾಯಿಲ್ ಮಾತನಾಡಿದರು.

ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಉದ್ಯೋಗ ಮೇಳ ಏರ್ಪಡಿಸಿ ಉದ್ಯೋಗ ಕಲ್ಪಿಸುವಂತಾಗಬೇಕು. ಉದ್ಯೋಗ ಮೇಳವನ್ನು ಪರಿಣಾಮಕಾರಿಯಾಗಿ ಏರ್ಪಡಿಸಿ ಉದ್ಯೋಗ ಕಲ್ಪಿಸಲು ಮುಂದಾಗುವಂತೆ ಉದ್ಯೋಗ ವಿನಿಮಯ ಅಧಿಕಾರಿಗೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.


ವಿವಿಧ ಇಲಾಖೆಗಳ ಕಾರ್ಯಕ್ರಮ ಸಂಬಂಧ ಎಲ್ಲಾ ಇಲಾಖೆಗಳ ಜೊತೆಗೂಡಿ ಒಂದು ಕಿರುಪುಸ್ತಕ ಹೊರ ತರುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಸದಸ್ಯರಾದ ಅಬ್ದುಲ್ ನಿಯಾಸ್, ಇಸ್ಮಾಯಿಲ್, ಖಾಲೀದ್ ಹಾಜಿ, ಸೂಫಿಯಾನ್ ಅವರು ಬ್ಯಾಂಕ್‌ಗಳ ಮೂಲಕ ಸಕಾಲದಲ್ಲಿ ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ ಕಲ್ಪಿಸಬೇಕು. ಇದರಿಂದ ಸಣ್ಣ ಪುಟ್ಟ ವ್ಯಾಪಾರಕ್ಕೆ ಸಹಕಾರಿಯಾಗಲಿದೆ. ಹಾಗೆಯೇ ವಿವಿಧ ಇಲಾಖೆಗಳ ಪ್ರಗತಿ ಸಕಾಲದಲ್ಲಿ ಸಾಧಿಸಬೇಕು. ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ದೊರೆಯುವಂತಾಗಬೇಕು. ಅಲ್ಪಸಂಖ್ಯಾತರು ಸಹ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಲು ಸರ್ಕಾರದ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಸಮಿತಿ ಸದಸ್ಯರು ಕೋರಿದರು. ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಲಹೆ ಮಾಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಹಿರಿಯ ಪೊಲೀಸ್ ಅಧಿಕಾರಿ ಐ.ಪಿ.ಮೇದಪ್ಪ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು, ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಜಿಲ್ಲಾ ಉದ್ಯೋಗ ವಿನಿಮಾಯಾಧಿಕಾರಿ ಮಂಜುನಾಥ್, ಸ್ವಚ್ಛ ಭಾರತ ಅಭಿಯಾನ ನೋಡಲ್ ಅಧಿಕಾರಿ ಜೀವನ್ ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಸೂರಕೋಡ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸಚಿನ್, ವಕ್ಫ್ ಅಧಿಕಾರಿ ಇರ್ಫಾನ್, ಇತರರು ಇದ್ದರು.