ಸಾರಾಂಶ
ಹಾವೇರಿ: ಹಿಂದುಳಿದ ವರ್ಗಗಳ ಉದ್ದಾರಕ ಎಂದು ಹೇಳಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಪರಿಶಿಷ್ಟರ ಮತ್ತು ಶೋಷಿತ ವರ್ಗದ .₹೧೧,೫೦೦ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ನೀಡಿ ಬಡವರ ಹೊಟ್ಟೆಯ ಮೇಲೆ ಬರೆ ಎಳೆದಿದ್ದಾರೆ ಎಂದು ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಅಧ್ಯಕ್ಷ ವಿವೇಕಾನಂದ ಡಬ್ಬಿ ಕಿಡಿಕಾರಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಹಣವನ್ನು ಅಕ್ರಮವಾಗಿ ಚಿನ್ನಾಭರಣ, ಬಾರ್‌ಗಳ ಮೂಲಕ ತೆಲಂಗಾಣ ಚುನಾವಣೆಗೆ ಬಳಕೆ ಮಾಡಿದ್ದಾರೆ. ರಾಜ್ಯದ ಹಣಕಾಸು ಖಾತೆ ಸಿಎಂ ಬಳಿಯೇ ಇದ್ದು, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರದ ಹಣಕಾಸು ಸಚಿವರ ಮೇಲೆ ಬೆರಳು ತೋರುತ್ತಿದ್ದಾರೆ ಎಂದು ಆರೋಪಿಸಿದರು.ಸರ್ಕಾರದ ವಿವಿಧ ನಿಗಮ ಮಂಡಳಿಗಳ ೧೧೯೪ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ತಮ್ಮ ಬಿಟ್ಟಿ ಭಾಗ್ಯಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಬಿಜೆಪಿ ನಾಯಕರು ಸ್ಪಷ್ಟ ಉತ್ತರ ನೀಡುವಂತೆ ಪಟ್ಟು ಹಿಡಿದಾಗ ಸಾಂವಿಧಾನಿಕವಾಗಿ ಉತ್ತರಿಸಲಾಗದೇ ಅಧಿವೇಶವನ್ನೆ ಮೊಟಕುಗೊಳಿಸಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು. ಕಾಂಗ್ರಸ್ಸಿನ ಎಲ್ಲಾ ಅಕ್ರಮಗಳು ಹಾಗೂ ಸಿಎಂ ಸಿದ್ದರಾಮಯ್ಯನವರ ಹಗರಣಗಳ ವಿರುದ್ಧ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಬೀದಿಗಿಳಿದು ಹೋರಾಟ ಮಾಡಲಿದೆ. ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದು, ಬಿಟ್ಟಿ ಭಾಗ್ಯಕ್ಕೆ ಶೋಷಿತರ ಹಣ ದುರ್ಬಳಕೆ ಮಾಡಿಕೊಂಡಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ ವಾಪಸ್ ನೀಡಲೇಬೇಕು. ಇಲ್ಲದಿದ್ದರೆ ಹೋರಾಟ ಮಾಡಿ, ನಿಮ್ಮ ಲೋಪಗಳನ್ನು ಜನರ ಮುಂದೆ ತೆರೆದಿಡುತ್ತೇವೆ ಎಂದು ಎಚ್ಚರಿಸಿದರು.ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿ, ಹಿಂದುಳಿದ ವರ್ಗದ ನಾಯಕ ಸಿ.ಎಚ್. ವಿಜಯಶಂಕರ ಅವರಿಗೆ ಇದೀಗ ರಾಜ್ಯಪಾಲ ಪಟ್ಟದೊರಕಿದೆ. ಇದರಿಂದ ಪಕ್ಷದ ನಿಷ್ಠಾವಂತರಿಗೆ ಪಕ್ಷ ಉತ್ತಮ ಜವಾಬ್ದಾರಿಗಳನ್ನು ನೀಡಲಿದೆ ಎಂಬುದು ಸ್ಪಷ್ಟ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಹಿಂದುಳಿದ ವರ್ಗದ ಮೋರ್ಚಾ ಜಿಲ್ಲಾಧ್ಯಕ್ಷ ನೀಲಪ್ಪ ಚಾವಡಿ, ಮುಖಂಡ ಮಂಜುನಾಥ ಮಡಿವಾಳರ, ಹೊನ್ನಪ್ಪ ಕೋಳಣ್ಣವರ, ಮಂಜುನಾಥ ಹುಲಗೂರ ಇತರರು ಇದ್ದರು.