ಸಾರಾಂಶ
ಭಯೋತ್ಪಾದಕರ ಮಟ್ಟಹಾಕುವ ಸಮರದಲ್ಲಿ ಭಾರತಕ್ಕೆ ಯಶಸ್ಸು ಸಿಗಲಿ, ಯೋಧರಿಗೆ ಶಕ್ತಿ ಸಿಗಲಿ ಎಂದು ಹಾರೈಸಿ ರಾಜ್ಯ ಬಿಜೆಪಿ ನಾಯಕರು ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಯೋತ್ಪಾದಕರ ಮಟ್ಟಹಾಕುವ ಸಮರದಲ್ಲಿ ಭಾರತಕ್ಕೆ ಯಶಸ್ಸು ಸಿಗಲಿ, ಯೋಧರಿಗೆ ಶಕ್ತಿ ಸಿಗಲಿ ಎಂದು ಹಾರೈಸಿ ರಾಜ್ಯ ಬಿಜೆಪಿ ನಾಯಕರು ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ, ಪೂಜೆ ಸಲ್ಲಿಸಿದ್ದಾರೆ.ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಗುರುವಾರ ಮಲ್ಲೇಶ್ವರದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಧಾನಿ ಮೋದಿ ಅವರ ದಿಟ್ಟ ನಿರ್ಧಾರದಿಂದ ಭಯೋತ್ಪಾದಕರನ್ನು ಮಟ್ಟ ಹಾಕುವ ಆಪರೇಷನ್ ಸಿಂದೂರ ಪ್ರಾರಂಭವಾಗಿದೆ. ನಾವು, ನಮ್ಮ ಪಕ್ಷದ ಮುಖಂಡರು ಬಹಳ ಭಕ್ತಿಯಿಂದ ಯೋಧರಿಗೆ ಶಕ್ತಿ ಸಿಗಲಿ ಎಂಬುದಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು. ಭಯೋತ್ಪಾದಕರ ನೆಲೆಯನ್ನು ಬುಡಸಮೇತ ಕಿತ್ತು ಹಾಕುವ ದೃಢಸಂಕಲ್ಪದೊಂದಿಗೆ ಮೋದಿ ಅವರು ಆರಂಭಿಸಿದ್ದಾರೆ. ಭಾರತಕ್ಕೆ ಯಶಸ್ಸು ಸಿಗಲಿ; ಯೋಧರಿಗೆ ಶಕ್ತಿ ಸಿಗಲಿ ಎಂಬುದಾಗಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.ಜಗತ್ತು ಇವತ್ತು ಭಾರತದ ಕಡೆ ನೋಡುತ್ತಿದೆ. ಭಯೋತ್ಪಾದನೆ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಜಗತ್ತಿನ ಬೇರೆಬೇರೆ ದೇಶಗಳಲ್ಲೂ ಭಯೋತ್ಪಾದನೆ ದುಸ್ವಪ್ನದಂತೆ ಕಾಡುತ್ತಿದೆ. ಇದು ಅಂತ್ಯಗೊಳ್ಳಲಿ. ನಾಳೆ ಕೂಡ ರಾಜ್ಯದ ಎಲ್ಲ ಜಿಲ್ಲೆಗಳು, ತಾಲ್ಲೂಕುಗಳು, ಮಂಡಲಗಳಲ್ಲೂ ಕಾರ್ಯಕರ್ತರು ಪೂಜೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮುಖಂಡರಾದ ವೈ.ಎ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣ್, ಎಸ್. ಹರೀಶ್ ಮತ್ತಿತರರು ಉಪಸ್ಥಿತರಿದ್ದರು.