ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಲು ಬಿಜೆಪಿ ವಿರೋಧ ಸರಿಯಲ್ಲ

| Published : Sep 04 2025, 01:00 AM IST

ಬಾನು ಮುಷ್ತಾಕ್‌ ದಸರಾ ಉದ್ಘಾಟಿಸಲು ಬಿಜೆಪಿ ವಿರೋಧ ಸರಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

೨೦೧೭ರಲ್ಲಿ ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟನೆ ನಡೆಸಿದ್ದರು. ಆಗ ಯಾವುದೇ ಆಕ್ಷೇಪ ಹೊರಹಾಕದ ಬಿಜೆಪಿ ನಾಯಕರು, ಈಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ದ್ವಂದ್ವ ನಿಲುವಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಸಮಾಜದವರು ಎಂಬ ಕಾರಣಕ್ಕೆ ಬಿಜೆಪಿಯವರು ವಿರೋಧಿಸುತ್ತಾರೆಯೇ? ತಾಯಿ ಚಾಮುಂಡಿ ದೇವಿಯನ್ನು ಬಿಜೆಪಿ ಗುತ್ತಿಗೆ ಪಡೆದಿದೆಯೇ? ಬೇರೆ ಧರ್ಮದವರು ಉದ್ಘಾಟನೆ ನಡೆಸಬಾರದು ಎಂಬ ಪ್ರತಾಪ್ ಸಿಂಹ ಅವರ ನಿಲುವು ಹೇಗೆ ನ್ಯಾಯಸಮ್ಮತ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅದೇ ಸಮಯದಲ್ಲಿ, ಬಾನು ಮುಸ್ತಾಕ್ ಪ್ರಶಸ್ತಿ ಗೆದ್ದಾಗ ಅಭಿನಂದನೆ ಸಲ್ಲಿಸಿದ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರು ಈಗ ಮೌನವಾಗಿರುವುದು ಅನುಮಾನ ಹುಟ್ಟಿಸುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಅಕ್ಟೋಬರ್‌ನಲ್ಲಿ ನಡೆಯಲಿರುವ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಮತ್ತು ವಕೀಲರಾದ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು ಸರಿಯಾದ ಕ್ರಮವಾಗಿದ್ದು, ಬಿಜೆಪಿಯ ವಿರೋಧ ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರ ದೇವರಾಜೇಗೌಡ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರ ಕಾದಂಬರಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ‘ಬೂಕರ್ ಪ್ರಶಸ್ತಿ’ಗೆ ಪಾತ್ರವಾಗಿದೆ. ಇದು ಕನ್ನಡಿಗರ ಹೆಮ್ಮೆ. ಆದ್ದರಿಂದಲೇ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಸಮರ್ಥನೀಯ ಎಂದು ತಿಳಿಸಿದರು.

೨೦೧೭ರಲ್ಲಿ ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟನೆ ನಡೆಸಿದ್ದರು. ಆಗ ಯಾವುದೇ ಆಕ್ಷೇಪ ಹೊರಹಾಕದ ಬಿಜೆಪಿ ನಾಯಕರು, ಈಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ದ್ವಂದ್ವ ನಿಲುವಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಸಮಾಜದವರು ಎಂಬ ಕಾರಣಕ್ಕೆ ಬಿಜೆಪಿಯವರು ವಿರೋಧಿಸುತ್ತಾರೆಯೇ? ತಾಯಿ ಚಾಮುಂಡಿ ದೇವಿಯನ್ನು ಬಿಜೆಪಿ ಗುತ್ತಿಗೆ ಪಡೆದಿದೆಯೇ? ಬೇರೆ ಧರ್ಮದವರು ಉದ್ಘಾಟನೆ ನಡೆಸಬಾರದು ಎಂಬ ಪ್ರತಾಪ್ ಸಿಂಹ ಅವರ ನಿಲುವು ಹೇಗೆ ನ್ಯಾಯಸಮ್ಮತ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅದೇ ಸಮಯದಲ್ಲಿ, ಬಾನು ಮುಸ್ತಾಕ್ ಪ್ರಶಸ್ತಿ ಗೆದ್ದಾಗ ಅಭಿನಂದನೆ ಸಲ್ಲಿಸಿದ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರು ಈಗ ಮೌನವಾಗಿರುವುದು ಅನುಮಾನ ಹುಟ್ಟಿಸುತ್ತದೆ. ಮೈಸೂರು ಸಂಸದ ಯದುವೀರ್ ಒಡೆಯರ್ ಕೂಡ ಪ್ರಾರಂಭದಲ್ಲಿ ಅವರ ಆಯ್ಕೆಯನ್ನು ಒಪ್ಪಿಕೊಂಡಿದ್ದರು. ಆದರೆ ನಂತರ ಬಿಜೆಪಿ ಒತ್ತಡಕ್ಕೆ ಮಣಿದು ವಿರೋಧ ವ್ಯಕ್ತಪಡಿಸಿರುವುದು ಶೋಚನೀಯ ಎಂದರು.

ಧಾರ್ಮಿಕ ರಾಜಕೀಯವನ್ನು ಬಿಟ್ಟು ಸಾಧನೆ ಆಧಾರಿತ ರಾಜಕಾರಣ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ದೇವರಾಜೇಗೌಡ ಕಿಡಿಕಾರಿದರು. ಜನಮನ ಗೆಲ್ಲಲು ಬಿಜೆಪಿ ಧಾರ್ಮಿಕ ಜಾತ್ರೆಗಳು, ಉದ್ಘಾಟನೆಗಳ ನೆರಳಿಗೆ ಅವಲಂಬಿತವಾಗಿದೆ. ಜೆಡಿಎಸ್ ಕೂಡ ಬಿಜೆಪಿ ಜೊತೆ ಕೈಜೋಡಿಸಿರುವುದು ಅವರ ಅವಲಂಬಿತ ರಾಜಕೀಯಕ್ಕೆ ಸಾಕ್ಷಿ” ಎಂದು ಆರೋಪಿಸಿದರು. ಈ ರೀತಿಯ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡಿ ಜನರ ಮನಸ್ಥಿತಿ ಮೇಲೆ ಹಾನಿ ಮಾಡುತ್ತವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ನಾಯಕರಹಳ್ಳಿ, ಶಿವಕುಮಾರ್, ಮೊಹಮದ್ ಗೌಸ್, ಚಂದ್ರಶೇಖರ್, ಶಂಬೇಗೌಡ, ಕುಮಾರ್ ಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.