ಸಂವಿಧಾನ ಬದಲು ಡಿಕೆಶಿ ಹೇಳಿಕೆ: ಬಿಜೆಪಿ ಆಕ್ರೋಶ

| Published : Mar 26 2025, 01:34 AM IST

ಸಂವಿಧಾನ ಬದಲು ಡಿಕೆಶಿ ಹೇಳಿಕೆ: ಬಿಜೆಪಿ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ಜಾರಿ ಮಾಡುವುದಕ್ಕಾಗಿ ಸಂವಿಧಾನ ಬದಲಿಸಲು ಸಿದ್ಧ ಎಂದು ಹೇಳಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಗಳವಾರ ತೀವ್ರ ಪ್ರತಿಭಟನೆ ನಡೆಸಿದರು.

ಡಿಕೆಶಿ ಭಾವಚಿತ್ರಕ್ಕೆ ಮೊಟ್ಟೆ ತೂರಿ ಆಕ್ರೋಶ, ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ಜಾರಿ ಮಾಡುವುದಕ್ಕಾಗಿ ಸಂವಿಧಾನ ಬದಲಿಸಲು ಸಿದ್ಧ ಎಂದು ಹೇಳಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಗಳವಾರ ತೀವ್ರ ಪ್ರತಿಭಟನೆ ನಡೆಸಿದರು.

ಡಿ.ಕೆ. ಶಿವಕುಮಾರ್‌ ಅವರ ಪ್ರತಿಕೃತಿ ದಹಿಸಲು ಯತ್ನಿಸಿದಾಗ ಪೊಲೀಸರು ತಡೆದರು. ಅಷ್ಟಕ್ಕೂ ಸುಮ್ಮನಾಗದ ಪ್ರತಿಭಟನಾ ಕಾರರು ಅನ್ನಭಾಗ್ಯ ಪ್ಲೆಕ್ಸ್‌ನಲ್ಲಿರುವ ಡಿಕೆಶಿ ಅವರ ಭಾವಚಿತ್ರಕ್ಕೆ ಮೊಟ್ಟೆ ಬೀಸಿದರು, ಕೆಲವರು ಕಲ್ಲು ತೂರಾಟ ಮಾಡಿದರು.

ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನಾಕಾರರ ಗುಂಪೊಂದು ಡಿಕೆಶಿ ಅವರ ಪ್ರತಿಕೃತಿ ದಹಿಸಲು ಯತ್ನಿಸಿತು. ಆಗ ಸ್ಥಳದಲ್ಲಿದ್ದ ಪೊಲೀಸರು ಪ್ರತಿಕೃತಿ ಹಾಗೂ ಪೆಟ್ರೋಲ್‌ ಬಾಟಲಿ ಕಸಿದುಕೊಂಡರು. ಪ್ರತಿಕೃತಿ ದಹಿಸಲು ತಡೆಯೊಡ್ಡಿದ ಪೊಲೀಸ್ ಅಧಿಕಾರಿಗಳ ಜತೆ ಕಾರ್ಯಕರ್ತರು ತೀವ್ರ ವಾಗ್ವಾದ ನಡೆಸಿದರು. ಕಾಂಗ್ರೆಸ್‌ಗೆ ಒಂದು ನ್ಯಾಯ, ಬಿಜೆಪಿಗೆ ಇನ್ನೊಂದು ನ್ಯಾಯವೇ ಎಂದು ಪ್ರಶ್ನಿಸಿದರು. ಪೊಲೀಸರು ಕಾಂಗ್ರೆಸ್ ಕೈಗೊಂಬೆ ಯಂತೆ ವರ್ತಿಸುವುದು ಬಿಡಬೇಕು. ಜನ ಸಾಮಾನ್ಯರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಬಳಿಕ ಕಾರ್ಯಕರ್ತರು ಆಜಾದ್ ವೃತ್ತದ ಸಮೀಪದಲ್ಲಿ ಅಳವಡಿಸಿದ್ಧ ಉಪ ಮುಖ್ಯಮಂತ್ರಿ ಭಾವಚಿತ್ರ ಇರುವ ಬ್ಯಾನರ್‌ಗೆ ಮೊಟ್ಟೆ ಹೊಡೆದು ಆಕ್ರೋಶ ವ್ಯಕ್ತಪಡಿಸಿ, ಕೆಲ ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಕೂಡಲೇ ಡಿಕೆಶಿ ವಿರುದ್ಧ ಕ್ರಮ ಜರುಗಿ ಸಬೇಕು ಎಂದು ಪಟ್ಟು ಹಿಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ ಶೆಟ್ಟಿ, ಕಾಂಗ್ರೆಸ್ ಹುಟ್ಟುಗುಣವೇ ಸಂವಿಧಾನ ತಿದ್ದುಪಡಿ ಮಾಡುವುದು. ದೇಶದ ಇತಿಹಾಸ ಪುಟ ಗಮನಿಸಿದರೆ ಅನೇಕ ಬಾರಿ ಕಾಂಗ್ರೆಸ್ ಆಡಳಿತಕ್ಕೆ ಅನುಗುಣವಾಗಿ ಸಂವಿಧಾನ ತಿದ್ದುಪಡಿ ಮಾಡಿ ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಮಣ್ಣುಪಾಲು ಮಾಡಿದೆ. ಇದೀಗ ರಾಜಕೀಯ ದೊಂಬ ರಾಟ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಗೋಮುಖ ವಾಘ್ರನ ಮತ್ತೊಂದು ಮುಖ ಡಿಕೆಶಿ ಮೂಲಕ ಬಯಲಾಗಿದೆ. ದೇಶದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಸಂವಿಧಾನ ಬದಲಿಸಲಿದೆ ಎಂಬ ಸುಳ್ಳು ವದಂತಿಯನ್ನು ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಸಂವಿಧಾನ ಕೈಪಿಡಿಯೊಂದಿಗೆ ಪ್ರಚಾರ ನಡೆಸಿದ್ದರು. ಆದರೀಗ ತಮ್ಮದೇ ಉಪ ಮುಖ್ಯಮಂತ್ರಿ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿ ಸಿದರು.

ಸಂವಿಧಾನ ಹಾಗೂ ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸುವ ಹಕ್ಕು ದೇಶದ ಪ್ರತಿಯೊಬ್ಬರಿಗಿದೆ. ಆದರೆ, ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳು ಬಳಸಿಕೊಂಡು ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ, ಶಾಸಕರ ನಡುವೆ ಹೊಂದಾಣಿಕೆ ಕೊರತೆಯಿದೆ. ಐದು ವರ್ಷಗಳು ಪೂರೈಸದೇ ಸದ್ಯದಲ್ಲೇ ಸರ್ಕಾರ ಪಥನಗೊಳ್ಳಲಿದೆ ಎಂದು ಹೇಳಿದರು.

ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, ಸಂವಿಧಾನಾತ್ಮಕವಾಗಿ ಅಧಿಕಾರ ಪಡೆದು, ಸಂವಿಧಾನಕ್ಕೆ ದ್ರೋಹ ವೆಸಗುವ ಉಪ ಮುಖ್ಯಮಂತ್ರಿಯವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ರಾಜ್ಯ ಹಾಗೂ ದೇಶದ ಬಹು ಸಂಖ್ಯಾತರಿಗೆ ಈ ಹೇಳಿಕೆಯಿಂದ ನೋವುಂಟಾಗಿದ್ದು ಕೂಡಲೇ ಡಿಕೆಶಿ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ದಲಿತರು, ಶೋಷಿತರು ಹಾಗೂ ಬಡವರ ಪರವೆಂದು ರಾಜ್ಯದ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟರ ಕೋಟ್ಯಂತರ ಹಣವನ್ನು ಗ್ಯಾರಂಟಿಗೆ ಬಳಸಿ ಅಪಮಾನಿಸಿದೆ. ಪಂಚಾಯಿತಿಯಿಂದ ಪಾರ್ಲಿಮೆಂಟ್‌ ತನಕ ಅತಿ ಹೆಚ್ಚು ದ್ರೋಹವೆಸಗಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ವಿಜಯ್‌ಕುಮಾರ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಮುಖಂಡರಾದ ಕೋಟೆ ರಂಗನಾಥ್, ಜಸಂತ್ ಅನಿಲ್‌ಕುಮಾರ್, ವೀಣಾ ರತ್ನಾಕರ್, ರವೀಂದ್ರ ಬೆಳವಾಡಿ, ಜಯವರ್ಧನ್, ಸಂತೋಷ್ ಕೋಟ್ಯಾನ್, ಈಶ್ವರಹಳ್ಳಿ ಮಹೇಶ್, ದಿನೇಶ್, ಎಚ್.ಕೆ. ಕೇಶವಮೂರ್ತಿ, ಬಿ.ರಾಜಪ್ಪ, ಸೋಮಶೇಖರ್, ಬೆನಡಿಕ್ಟ್ ಜೇಮ್ಸ್, ಪ್ರದೀಪ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.ಪೋಟೋ ಫೈಲ್‌ ನೇಮ್‌ 25 ಕೆಸಿಕೆಎಂ 1ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.