ಸಾರಾಂಶ
ಶಿವಮೊಗ್ಗ: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರ ಹೆಸರನ್ನು ಮುಖ್ಯಮಂತ್ರಿಗಳು ಸೂಚಿಸಿದ ಮೇಲೆ ಬಿಜೆಪಿಯವರು ಎಂದಿನಂತೆ ತಮ್ಮ ಧರ್ಮಾಧಾರಿತ ಬೇಳೆಯನ್ನು ಬೇಯಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ಆರೋಪಿಸಿದರು.ಮಂಗಳವಾರ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿ, ದಸರಾ ರಾಜ್ಯದ ನಾಡಹಬ್ಬವಾಗಿದ್ದು, ತನ್ನದೇ ಆದ ಇತಿಹಾಸ ಹೊಂದಿದೆ. ದಸರಾ ಸಂಬಂಧಿಸಿದಂತೆ 24 ಸಮಿತಿಗಳಿದ್ದು, ಉದ್ಘಾಟನೆಯ ಪರಮಾಧಿಕಾರವನ್ನು ಪ್ರತಿ ವರ್ಷದಂತೆ ಮುಖ್ಯಮಂತ್ರಿಗಳ ವಿವೇಚನೆಗೆ ಸಮಿತಿ ಬಿಟ್ಟಿತ್ತು. ಕನ್ನಡಿಗರಿಗೆ ಹೆಮ್ಮೆತರುವ ಅಂತಾರಾಷ್ಟ್ರೀಯ ಶ್ರೇಷ್ಠ ಬೂಕರ್ ಪ್ರಶಸ್ತಿ ಪಡೆದ ಬಾನುಮುಷ್ತಾಕ್ ಅವರ ಹೆಸರನ್ನು ದಸರಾ ಉದ್ಘಾಟನೆಗೆ ಸೂಚಿಸಲಾಯಿತು. ಆಗ ಪಕ್ಷಾತೀತವಾಗಿ ಅನುಮೋದನೆಯನ್ನು ನೀಡಿ ಈಗ ಬಿಜೆಪಿಯವರು ರಾಜಕಾರಣ ಮಾಡುತ್ತಿರುವುದು ಖಂಡನೀಯ. ಇತಂಹ ಹೀನಾ ರಾಜಕಾರಣ ಮಾಡುವುದನ್ನು ವಿಪಕ್ಷಗಳು ಬಿಡಬೇಕು ಎಂದು ಆಗ್ರಹಿಸಿದರು.ದಸರಾಕ್ಕೆ ಮೆರವಣಿಗೆಗೆ ತೆರಳುವ ಆನೆಗಳಿಗೆ ತರಬೇತಿ ನೀಡುವುದರಿಂದ ಹಿಡಿದು, ಅಂಬಾರಿ ಕಟ್ಟುವವರೆಗೆ ಎಲ್ಲವನ್ನೂ ಕೂಡ ಮುಸ್ಲಿಂ ಮಾವುತರೇ ನಿರ್ವಹಿಸುತ್ತಾರೆ. ಅವರು ಕೂಡ ಶ್ರದ್ಧಾ-ಭಕ್ತಿಯಿಂದ ಯಶಸ್ವಿಯಾಗಿ ಈ ಕಾರ್ಯವನ್ನು ಸುಸೂತ್ರವಾಗಿ ನಡೆಸುತ್ತಾರೆ. ಆಗ ಅಡ್ಡಿ ಬರದ ಜಾತಿ ಬಿಜೆಪಿಯವರಿಗೆ ಉದ್ಘಾಟನೆ ಸಂದರ್ಭದಲ್ಲಿ ಅಡ್ಡಿಬರುತ್ತದೆಯೇ ಎಂದು ಪ್ರಶ್ನಿಸಿದರು.ದಸರಾ ಸಂದರ್ಭದಲ್ಲಿ ಅಂಬು ಕಡಿಯುವಾಗ ಅನೇಕ ಅಧಿಕಾರಿಗಳು ಬೇರೆ ಜಾತಿ-ಧರ್ಮದವರು ಇರುತ್ತಾರೆ. ಹಾಗಾದರೆ ಅಂಬು ಕಡಿಯುವುದನ್ನು ನಿಲ್ಲಿಸುತ್ತಾರಾ? ದಸರಾ ಸಮಿತಿಯಲ್ಲಿ ಎಲ್ಲಾ ಸಮುದಾಯದ ಅಧಿಕಾರಿಗಳು ಇರುತ್ತಾರೆ. ಕಾಂಗ್ರೆಸ್ ಪಕ್ಷ ಇದ್ದಾಗಲೇ ರೈತ ದಸರಾ, ಆಹಾರ ದಸರಾ, ಯೋಗ ದಸರಾ ಜಾರಿಗೆ ಬಂತು. ಶಿವಮೊಗ್ಗ ಮಹಾನಗರ ಪಾಲಿಕೆಯ ಮೊದಲ ಮೇಯರ್ ಖುರ್ಷಿದಾಬಾನು ದಸರಾವನ್ನು ಉದ್ಘಾಟಿಸಿದ್ದರು. ಸಂದರ್ಭಕ್ಕೆ ತಕ್ಕಹಾಗೆ ಬಿಜೆಪಿಯ ರಾಜಕಾರಣ, ದ್ವಂದ್ವನೀತಿಯನ್ನು ಜನ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜನ ಶಾಂತಿಯಿಂದ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಂಸ್ಕೃತಿಕವಾಗಿ, ಜಾತ್ಯಾತೀತವಾಗಿ ದಸರಾ ಹಬ್ಬವನ್ನು ಆಚರಿಸಲು ಎಲ್ಲಾ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಕುಮಾರ್, ವಿಶ್ವನಾಥಕಾಶಿ, ನಾಗರಾಜ್ ಕಂಕಾರಿ, ಪಾಲಾಕ್ಷಿ, ಚಿನ್ನಪ್ಪ, ಯಮನಾರಂಗೇಗೌಡ, ಎಸ್.ಟಿ.ಚಂದ್ರಶೇಖರ್, ಗಂಗಾಧರ್, ಬಾಬು, ಮಧು, ಪವನ್‌ಕುಮಾರ್ ಮತ್ತಿತರರಿದ್ದರು.