ರಾಜ್ಯದಲ್ಲಿನ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು. | Kannada Prabha
Image Credit: KP
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದಲ್ಲಿ ವರ್ಗಾವಣೆ ದಂದೆ, ವ್ಯಾಪಕ ಭ್ರಷ್ಟಾಚಾರ, ವಿದ್ಯುತ್ ಕಡಿತ ಹಾಗೂ ಜನವಿರೋಧಿ ನೀತಿ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪ್ರತಿಬಟನೆ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಈ ವೇಳೆ ಮನವಿ ಸ್ವೀಕರಿಸಲು ಅಧಿಕಾರಿಗಳು ಇರದ ಕಾರಣ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಕೆಲ ಹೊತ್ತು ಧರಣಿ ನಡೆಸಿದರು. ಮನವಿ ಸ್ವೀಕರಿಸಲು ಓರ್ವ ಅಧಿಕಾರಿಯೂ ಇಲ್ಲ ಎಂದಾದರೆ ಹೇಗೆ? ಇದು ಯಾವ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಜಿಗಜಿಣಗಿ ಮಾತನಾಡಿ, ಬೆಂಗಳೂರಿನ ಅಂಬಿಕಾಪತಿ ಮನೆಯಲ್ಲಿ ಕೋಟಿ ಕೋಟಿ ಹಣದ ಕಂತೆ ಪತ್ತೆಯಾಗಿದೆ. ಇದು ಕೇವಲ ಒಂದು ಉದಾಹರಣೆ ಅಷ್ಟೆ. ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಗೆ ಕಾಂಗ್ರೆಸ್ ಸರ್ಕಾರ ಕೋಟ್ಯಂತರ ಕಮಿಷನ್ ಪಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು. ಪ್ರತಿಭಟನಾಕಾರಾರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವಿದ್ಯುತ್ ಕ್ಷಾಮ ಎದುರಾಗಿದ್ದು, ವಿದ್ಯುತ್ ಕೊರತೆಯಿಂದ ರೈತರ ಜಮೀನುಗಳಿಗೆ ನೀರು ಹಾಯಿಸಲಾಗುತ್ತಿಲ್ಲ. ದುಬಾರಿ ಕರೆಂಟ್ ಬಿಲ್ ಸಾರ್ವಜನಿಕರನ್ನು ಹೈರಾಣಗೊಳಿಸಿದೆ. ರೈತರು ಹಾಗೂ ಸಾರ್ವಜನಿಕರು ನಿತ್ಯ ತೊಂದರೆ ಎದುರಿಸುವಂತಾಗಿದೆ. ಬಡವರು, ಕೂಲಿ ಕಾರ್ಮಿಕರು ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದ್ದು, ಕೂಡಲೇ ಮುಖ್ಯಮಂತ್ರಿ ಹಾಗೂ ಎಲ್ಲ ಸಚಿವ ಸಂಪುಟ ಸದಸ್ಯರು ರಾಜಿನಾಮೆ ನೀಡಿ ಮನೆಗೆ ಹೋಗಬೇಕು ಎಂದು ಒತ್ತಾಯಿಸಿದರು. ಬಿಜೆಪಿ ನಗರ ಮಂಡಳ ಅಧ್ಯಕ್ಷ, ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ರಾಜ್ಯ ಸರ್ಕಾರ ಜನತೆಯನ್ನು ಕಗ್ಗತ್ತಲ್ಲಿ ಮುಳುಗಿಸಿದೆ. ಕಾಂಗ್ರೆಸ್ ಸರ್ಕಾರ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು. ಬೆಳಗಾವಿ ವಿಭಾಗದ ಬಿಜೆಪಿ ಪ್ರಭಾರಿ ಚಂದ್ರಶೇಖರ ಕವಟಗಿ, ಮಹಾನಗರ ಪಾಲಿಕೆ ಸದಸ್ಯ ರಾಜು ಕುರಿಯವರ ಮಾತನಾಡಿದರು. ನಂತರ ಬಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮನವಿ ಸ್ವೀಕರಿಸಿದರು. ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿಜುಗೌಡ ಪಾಟೀಲ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೊಟ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕಾರಜೋಳ, ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ಸಂಜಯ ಪಾಟೀಲ ಕನಮಡಿ, ಅಶೋಕ ಅಲ್ಲಾಪೂರ, ಡಾ. ಬಾಬುರಾಜೇಂದ್ರ ನಾಯಕ, ಮಹೇಂದ್ರ ನಾಯಕ, ಗೋಪಾಲ ಘಟಕಾಂಬಳೆ, ರಾಜು ಮಗಿಮಠ, ಮಲ್ಲಮ್ಮ ಜೋಗೂರ, ಛಾಯಾ ಮಸಿಯವರ, ಲಕ್ಷ್ಮೀ ಕನ್ನೋಳ್ಳಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾರ ಗೋಸಾವಿ, ವಿಠಲ ಹೊಸಪೇಟ, ಬಸವರಾಜ ಬೈಚಬಾಳ, ಕೃಷ್ಣಾ ಗುನ್ಹಾಳಕರ, ವಿಜಯ ಜೋಶಿ, ಸಂದೀಪ ಪಾಟೀಲ, ರಾಜೇಶ ತವಸೆ, ವಿಕಾಸ ಪದಕಿ, ಕಾಂತು ಶಿಂಧೆ, ಶಂಕರ ಹೂಗಾರ, ಅಬ್ದುಲ್ ಸತ್ತಾರ, ವಿನಾಯಕ ದಹಿಂಡೆ, ಶರಣಬಸು ಕುಂಬಾರ, ಮಡಿವಾಳ ಯಾಳವಾರ, ಆನಂದ ಮುಚ್ಚಂಡಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.