ಸಾರಾಂಶ
ಗದಗ: ರಾಜ್ಯ ಸರ್ಕಾರ ತೈಲ ಬೆಲೆಗಳನ್ನು ಹೆಚ್ಚಿಸಿರುವುದನ್ನು ಖಂಡಿಸಿ ಸೋಮವಾರ ಗದಗ ನಗರದ ಜನರಲ್ ಕಾರ್ಯಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿ ಲೀ. ಪೆಟ್ರೋಲ್‌ಗೆ ₹3 ಹಾಗೂ ಡೀಸೆಲ್ ₹3.50 ಹೆಚ್ಚಿಸಿರುವುದಕ್ಕೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದು, ಗದಗ ನಗರದಲ್ಲಿ ಪ್ರತಿಭಟನೆ ಕಾವು ಜೋರಾಗಿತ್ತು.ಜಿಲ್ಲಾ ಬಿಜೆಪಿ ಕಾರ್ಯಕರ್ತರು ಎತ್ತು ಚಕ್ಕಡಿಗಳೊಂದಿಗೆ ಆಗಮಿಸಿ, ಚಕ್ಕಡಿಯಲ್ಲಿ ಬೈಕ್ ಇಟ್ಟು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ತೈಲ ಬೆಲೆ ಹೆಚ್ಚಿಸಿ ಜನರ ಜೀವನ ದುಸ್ತರಗೊಳಿಸಿದೆ. ವಿರೋಧ ಪಕ್ಷದಲ್ಲಿದ್ದಾಗ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಬಗ್ಗೆ ತಾಸುಗಟ್ಟಲೆ ಭಾಷಣ ಮಾಡುತ್ತಿದ್ದ ಸಿದ್ದರಾಮಯ್ಯ ಈಗ ತಾವೇ ಬೆಲೆ ಏರಿಕೆ ಮಾಡಿ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಮ್ಮ ಗ್ಯಾರಂಟಿ ಯೋಜನೆಗಳನ್ನು ಪೂರೈಸಲು ಎಲ್ಲ ಅಗತ್ಯ ವಸ್ತುಗಳ ವಿಶೇಷವಾಗಿ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಿಸುವ ಮೂಲಕ ಕರ್ನಾಟಕದ ಜನತೆಗೆ ಮಹಾಮೋಸ ಮಾಡಿದೆ. ಮಾತನಾಡಿದರೆ ನುಡಿದಂತೆ ನಡೆದ ಸರ್ಕಾರ ಎಂದು ಬೊಬ್ಬೆ ಹೊಡೆಯುವ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜ್ಯದ ಹಿತದೃಷ್ಟಿ ಕಾಪಾಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಚಿವರೆಲ್ಲಾ ಬೆಲೆ ಏರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಮನ ಬಂದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಮಾಜಿ ಅಧ್ಯಕ್ಷ ಹಿರಿಯ ಮುಖಂಡ ಎಂ.ಎಸ್. ಕರೀಗೌಡ್ರ ಮಾತನಾಡಿ, ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ರಾಜ್ಯದ ಹಿತದೃಷ್ಟಿಯನ್ನು ಕಾಪಾಡುವುದನ್ನು ಬಿಟ್ಟು ತಮ್ಮ ಖುರ್ಚಿ ಭದ್ರಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಟ್ಟ ಹಾಗೂ ಭ್ರಷ್ಟ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಗರ ಮಂಡಲ ಅಧ್ಯಕ್ಷ ಅನಿಲ್ ಅಬ್ಬಿಗೇರಿ ಮಾತನಾಡಿ, ಕಾಂಗ್ರೆಸ್‌ನ ಪೊಳ್ಳು, ಸುಳ್ಳು ಗ್ಯಾರಂಟಿಗಳನ್ನು ಪೂರೈಸಲು ರಾಜ್ಯದ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಮತಿಹೀನ ಸರ್ಕಾರ ನಮ್ಮ ರಾಜ್ಯವನ್ನಾಳುತ್ತಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಕೊಟ್ಟ ಗ್ಯಾರಂಟಿಗೆ ನಮ್ಮಿಂದ ವಸೂಲಿ ಮಾಡಿ, ನಮಗೆ ಕೊಡುತ್ತಿದೆ. ಜನರಿಗೆ ಸತ್ಯಾಂಶ ತಿಳಿಸುವ ಕಾರ್ಯ ಮಾಡುತ್ತೇವೆ ಎಂದರು.ರಸ್ತೆ ತಡೆ: ಪ್ರತಿಭಟನೆ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ ಹಿನ್ನೆಲೆ ದೂರ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಪರದಾಡಿದರು. ಪ್ರತಿಭಟನೆಯಿಂದ ಅರ್ಧಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಯಿತು. ಮಹಿಳಾ ಕಾರ್ಯಕರ್ತರು ತೆಂಗಿನ ಚಿಪ್ಪು ಪ್ರದರ್ಶಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಆರ್.ಕೆ. ಚವ್ಹಾಣ, ಫಕ್ಕಿರೇಶ ರಟ್ಟಿಹಳ್ಳಿ, ಮಂಡಲ ಅಧ್ಯಕ್ಷ ರವಿ ಕರಿಗಾರ, ನಿಂಗಪ್ಪ ಮಣ್ಣೂರ, ಮುತ್ತು ಕಡಗದ, ಹಿರಿಯರಾದ ಕಾಂತೀಲಾಲ ಬನ್ಸಾಲಿ, ಸಂಗಮೇಶ ದುಂದೂರ, ಎಂ.ಎಂ. ಹಿರೇಮಠ, ಜಗನ್ನಾಥಸಾ ಭಾಂಡಗೆ, ನಾಗರಾಜ ಕುಲಕರ್ಣಿ, ಶ್ರೀಪತಿ ಉಡುಪಿ, ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ರಮೇಶ ಹತ್ತಿಕಾಳ, ವಿ.ಕೆ. ಗುರುಮಠ, ಸಂತೋಷ ಅಕ್ಕಿ, ಬೂದಪ್ಪ ಹಳ್ಳಿ, ಭದ್ರೇಶ ಕುಸ್ಲಾಪುರ, ಗಂಗಾಧರ ಹಬೀಬ, ಕಿಷನ್ ಮೇರವಾಡೆ, ರಾಘವೇಂದ್ರ ಯಳವತ್ತಿ, ಸುರೇಶ ಚಿತ್ತರಗಿ, ಮಾನ್ವಿ, ರವಿ ದಂಡಿನ, ಬಸವರಾಜ ಸಂಗನಾಳ, ಅಶೋಕ ಕರೂರ, ವೈ.ಪಿ. ಅಡ್ನೂರ, ಮಂಜುನಾಥ ಹಳ್ಳೂರಮಠ, ನಾಗರಾಜ ತಳವಾರ, ಚಂದ್ರು ತಡಸದ, ಪ್ರಕಾಶ ಅಂಗಡಿ, ಲಕ್ಷ್ಮೀ ಶಂಕರ ಕಾಕಿ, ಮಹೇಶ ದಾಸರ, ಮಂಜುನಾಥ ತಳವಾರ ಇದ್ದರು.