ಸಾರಾಂಶ
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕಾಂಗ್ರೆಸ್ ಆಡಳಿತದಲ್ಲಿ ಜನ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಕಾಂಗ್ರೆಸ್ ಅತಿರೇಕದಿಂದ ವರ್ತಿಸುವ ಮೂಲಕ ಸಂವಿಧಾನಕ್ಕೆ ಅಪಚಾರವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತನ್ನು ತಿರುಚಿದ ಹಾಗೂ ಸಿ.ಟಿ.ರವಿ ಬಂಧಿಸಿ ಹಲ್ಲೆ ಮಾಡಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಶುಕ್ರವಾರ ನಗರದ ಮಲ್ಲಿಕಟ್ಟೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು. ಬಳಿಕ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯತ್ತ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಈ ಸಂದರ್ಭ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತಳ್ಳಾಟ-ಹೊಯ್ದಾಟ ನಡೆಯಿತು. ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುನ್ನುಗಿದ್ದರು. ಒಂದು ಹಂತದಲ್ಲಿ ಯುವಮೋರ್ಚಾ ಉತ್ತರ ಮಂಡಲ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಅವರು ಪೊಲೀಸರ ಕಣ್ತಪ್ಪಿಸಿ ರಸ್ತೆಗೆ ಹಾಕಲಾದ ಬ್ಯಾರಿಕೇಡ್ ದಾಟಿ ಮುನ್ನುಗುವ ಪ್ರಯತ್ನ ಮಾಡಿದರು. ಆದರೆ ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೆ ಬ್ಯಾರಿಕೇಡ್ ಹಾರಲು ಯತ್ನಿಸಿದ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ: ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕಾಂಗ್ರೆಸ್ ಆಡಳಿತದಲ್ಲಿ ಜನ ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಕಾಂಗ್ರೆಸ್ ಅತಿರೇಕದಿಂದ ವರ್ತಿಸುವ ಮೂಲಕ ಸಂವಿಧಾನಕ್ಕೆ ಅಪಚಾರವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮೇಯರ್ ಮನೋಜ್ ಕೋಡಿಕಲ್, ಉಪಮೇಯರ್ ಭಾನುಮತಿ, ದಿವಾಕರ್, ಕಾರ್ಪೊರೇಟರ್‌ಗಳಾದ ಮನೋಹರ್ ಶೆಟ್ಟಿ, ಸಂಗೀತಾ, ಪೂರ್ಣಿಮಾ, ಶ್ವೇತಾ ಪೂಜಾರಿ, ಜಯಲಕ್ಷ್ಮಿ ಶೆಟ್ಟಿತ್ರ, ಸಂದೀಪ್ ಗರೋಡಿ, ಭರತ್ ಕುಮಾರ್, ಜಯಾನಂದ್ ಅಂಚನ್, ಮುಖಂಡರಾದ ಭಾಸ್ಕರ್‌ಚಂದ್ರ ಶೆಟ್ಟಿ, ಹರ್ಷಿತ್ ಕೊಟ್ಟಾರಿ, ಅವಿನಾಶ್ ಮತ್ತಿತರರು ಇದ್ದರು.