ಸಾರಾಂಶ
ಆಕ್ರೋಶ । ತಾಲೂಕು ಕಚೇರಿ ಎದುರು ಧರಣಿ । ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಅರಸೀಕೆರೆರಾಜ್ಯದ ಕಾಂಗ್ರೆಸ್ ಸರ್ಕಾರದ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ನಗರ ಮತ್ತು ಗ್ರಾಮಾಂತರ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ನಗರಾಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರದ ಆಸೆಗಾಗಿ ಬಡವರಿಗೆ ಪಂಚ ಭಾಗ್ಯಗಳ ಆಸೆ ಆಮಿಷ ತೋರಿಸಿ ಮತ್ತೊಂದೆಡೆ ತೆರಿಗೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಶ್ರೀಸಾಮಾನ್ಯನ ಹೊಟ್ಟೆ ಮೇಲೆ ಹೊಡೆಯುವಂತಹ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ನಿಭಾಯಿಸಲು ಸಾಧ್ಯವಾಗದೆ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಕಿಡಿಕಾರಿದರು.ಯೋಜನೆಗಳಿಗೆ ಹಣ ಹೊಂದಿಸಲು ಪೆಟ್ರೋಲ್ ಡೀಸೆಲ್ ಚಿಲ್ಲರೆ ಮಾರಾಟ ತೆರಿಗೆಯನ್ನು ದಿಢೀರನೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಇದರಿಂದ ಜನರ ಸಂಚಾರ ಹಾಗೂ ಸರಕು ಸಾಗಣೆ ವೆಚ್ಚ ಜಾಸ್ತಿಯಾಗಿ ಎಲ್ಲಾ ಸೇವೆಗಳ ಮತ್ತು ನಿತ್ಯದ ವಸ್ತುಗಳ ಬೆಲೆ ದುಬಾರಿಯಾಗುತ್ತವೆ. ಸಹಜವಾಗಿಯೇ ಬಡವರ ಮತ್ತು ಜನ ಸಾಮಾನ್ಯರ ತಿಂಗಳ ವೆಚ್ಚ ಹೆಚ್ಚುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಾಂತರ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಇಂದಿನ ಕಾಂಗ್ರೆಸ್ ಸರ್ಕಾರದಷ್ಟು ಜನ ವಿರೋಧಿ ಸರ್ಕಾರವನ್ನು ಜನತೆ ಎಂದೂ ಕಂಡಿಲ್ಲ. ಸುಳ್ಳು ಭರವಸೆ ಹಾಗೂ ಯೋಜನೆಗಳನ್ನು ಪೂರೈಸಲಾಗದೆ ರಾಜ್ಯದ ಖಜಾನೆ ಬರಿದು ಮಾಡಿದೆ. ಅಧಿಕಾರದ ಆಸೆಗಾಗಿ ಜನ ಕಲ್ಯಾಣ ಆಡಳಿತ ಮಾಡುತ್ತೇವೆ ಎಂದು ಜನತೆಗೆ ನಂಬಿಸಿ ಇಂದು ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಿಸಿರುವುದರಿಂದ ಜನರು ನಿತ್ಯ ಖರೀದಿಸುವ ತರಕಾರಿ, ಔಷದಿ,ದಿನಸಿ ವಸ್ತುಗಳು ಸೇರಿದಂತೆ ಎಲ್ಲಾ ಬೆಲೆಗಳು ಗಗನಕ್ಕೇರುತ್ತವೆ. ಇದರಿಂದ ಬಡವರು, ಮಧ್ಯಮ ವರ್ಗದವರು ಜೀವನ ಸಾಗಿಸುವುದು ಕಷ್ಟಕರವಾಗುತ್ತದೆ ಎಂದು ಹೇಳಿದರು.ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್ ಮಾತನಾಡಿ, ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಯಾವುದೇ ಜನಪರ ಕೆಲಸ ಮಾಡದೇ ಕೇವಲ ಅಗತ್ಯ ವಸ್ತುಗಳ ಬೆಲೆಗಳ ಏರಿಕೆ ಮಾಡುವುದರಲ್ಲಿ ನಿರತವಾಗಿದೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರ ಬದುಕನ್ನು ದುರಂತವಾಗಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದ್ದು ಜನತೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಸರ್ಕಾರದ ಲೋಪದೋಷಗಳನ್ನು ಸಾರ್ವಜನಿಕರಿಗೆ ತಿಳಿಸುವಂತಹ ಜನಜಾಗೃತಿ ಕೆಲಸವನ್ನು ಭಾರತೀಯ ಜನತಾ ಪಾರ್ಟಿ ಮಾಡುತ್ತಿದೆ ಎಂದು ಹೇಳಿದರು.
ದರ ಏರಿಕೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ತಕ್ಷಣ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.ಇದಕ್ಕೂ ಮುನ್ನ ಬಿಜೆಪಿಯ ಹಿರಿಯ ಮುಖಂಡ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನು ಪ್ರಕಾಶ್ ನಿಧನಕ್ಕೆ ನಗರದ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿಜಯ್ ವಿಕ್ರಂ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಶಿವರಾಜ್, ಮುಖಂಡರಾದ ಸುನಿಲ್ ಶಾಸ್ತ್ರಿ, ಬಾಣಾವಾರ ಜಯಣ್ಣ, ವಿರೂಪಾಕ್ಷಪ್ಪ, ಯಾದಾಪುರ ತೇಜಸ್, ಸತೀಶ್, ದಯಾನಂದ್, ಯತೀಶ್ ಇತರರು ಇದ್ದರು.