ರೈತರ ವಿವಿಧ ಸಮಸ್ಯೆ ಪರಿಹರಿಸಿ, ಹಳಿಯಾಳದಲ್ಲಿ ಬಿಜೆಪಿ ಪ್ರತಿಭಟನೆ

| Published : Jun 02 2024, 01:45 AM IST

ರೈತರ ವಿವಿಧ ಸಮಸ್ಯೆ ಪರಿಹರಿಸಿ, ಹಳಿಯಾಳದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹಳಿಯಾಳ ಬಿಜೆಪಿ ರೈತ ಮೋರ್ಚಾ ವತಿಯಿಂದ ಮಾಜಿ ಶಾಸಕ ಸುನೀಲ್‌ ಹೆಗಡೆ ನೇತೃತ್ವದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಹಳಿಯಾಳ: ರೈತ ವರ್ಗ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹಳಿಯಾಳ ಬಿಜೆಪಿ ರೈತ ಮೋರ್ಚಾ ವತಿಯಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಶ್ರೀ ಶಿವಾಜಿ ವೃತದಿಂದ ಆಡಳಿತ ಸೌಧದ ವರೆಗೆ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಮುಂದಾಳತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಬಿಜೆಪಿ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ್ ಆರ್. ಭಾಗವಾನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ವಿರೋಧಿ ಸರ್ಕಾರ: ನಮ್ಮ ರಾಜ್ಯವು ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದು, ರಾಜ್ಯದ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ರಾಜ್ಯ ಸರ್ಕಾರವು ಬಿತ್ತನೆ ಬೀಜದ ದರವನ್ನು ಶೇ. 50ರಿಂದ ಶೇ. 60ರಷ್ಟು ಏರಿಸಿದೆ. ಸರ್ಕಾರದ ಈ ಧೋರಣೆಯಿಂದಾಗಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಿತ್ತನೆ ಬೀಜದ ದರ ಹೆಚ್ಚಿಸಿದ್ದರಿಂದ ಬಡರೈತರು ಈ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗದೇ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಕೃಷಿ ಭೂಮಿಯಲ್ಲಿ ಬಿತ್ತದೇ ಬಂಜರು ಬಿಡುವುದರಿಂದ ರಾಜ್ಯ ಮತ್ತು ದೇಶದ ಆರ್ಥಿಕ ಸ್ಥಿತಿಗೆ ಹಾನಿ ಸಂಭವಿಸಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಮೇಲೆ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹ ಧನ ಸಹ ಈ ವರೆಗೂ ನೀಡಲ್ಲ. ಆದುದರಿಂದ ರಾಜ್ಯ ಸರ್ಕಾರ ತಕ್ಷಣ ಬಿತ್ತನೆ ಬೀಜದ ದರ ಕಡಿಮೆ ಮಾಡಬೇಕು. ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ರೈತರಿಗೆ ₹5 ಲಕ್ಷದ ವರೆಗೆ ಬೆಳೆಸಾಲ ಮತ್ತು ₹15 ಲಕ್ಷದ ವರೆಗೆ ಮಾಧ್ಯಮಿಕ ಸಾಲವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ: ಬಿಜೆಪಿ ಮಂಡಿಸಿದ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬಿಜೆಪಿಯ ರೈತ ಮೋರ್ಚಾದಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಮನವಿಯ ಪ್ರತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ, ಕೃಷಿ ಸಚಿವ, ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆಯ ನಿರ್ದೇಶಕರಿಗೆ ರವಾನಿಸಲಾಯಿತು.

ರೈತ ಮೋರ್ಚಾ ತಾಲೂಕು ಅಧ್ಯಕ್ಷ ಸೋನಪ್ಪಾ ಸುಣಕಾರ, ಕಾರ್ಯದರ್ಶಿ ಮಾರುತಿ ಭೋಸಲೆ, ಸಹದೇವ ಮಿರಾಶಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಸಣ್ಣ ಕುರುಬಗಟ್ಟಿ, ಜಿಲ್ಲಾ ಸದಸ್ಯ ನಾರಾಯಣ ಕೇಸರೇಕರ, ಪ್ರಮುಖರಾದ ಸಂತೋಷ ಘಟಕಾಂಬ್ಳೆ, ಪುರಸಭೆ ಸದಸ್ಯರಾದ ಚಂದ್ರಕಾಂತ ಕಮ್ಮಾರ, ರೂಪಾ ಗಿರಿ, ನಗರ ಘಟಕದ ಅಧ್ಯಕ್ಷ ತಾನಾಜಿ ಪಟ್ಟೇಕರ, ಪ್ರಮುಖರಾದ ಪಾಂಡುರಂಗ ಪಾಟೀಲ, ಆಕಾಶ ಉಪ್ಪೀಣ, ಡೋಂಗ್ರು ಕೇಸರೇಕರ, ಯಲ್ಲಪ್ಪಾ ಹೊನ್ನೋಜಿ, ಆನಂದ ಕಂಚನಾಳಕರ, ಸಂಗೀತಾ ಜಾವಳೇಕರ, ಜಯಲಕ್ಷ್ಮೀ ಚವ್ಹಾಣ, ರಂಜನಾ ನಡತಿ, ರತ್ನಮಾಲಾ ಮೂಳೆ, ಶಕುಂತಲಾ ಜಾಧವ, ಮಾಲಾ ಹುಂಡೇಕರ ಇದ್ದರು.