ಸಚಿನ್‌ ಆತ್ಮಹತ್ಯೆ ಪ್ರಕರಣ ಹಿನ್ನೆಲೆ : ಇಂದು ಬಿಜೆಪಿ ನಾಯಕರಿಂದ ಪ್ರಿಯಾಂಕ್‌ ಮನೆ ಮುತ್ತಿಗೆ

| Published : Jan 04 2025, 12:34 AM IST / Updated: Jan 04 2025, 10:49 AM IST

ಸಾರಾಂಶ

ಸಚಿನ್‌ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಸಚಿವರ ರಾಜೀನಾಮೆಗೆ ವಿಜಯೇಂದ್ರ, ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಎನ್‌. ರವಿಕುಮಾರ್‌ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ.

  ಕಲಬುರಗಿ : ಬೀದರ್ ಮೂಲದ ಕಂಟ್ರಾಕ್ಟರ್ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್‌ ನೋಟ್‌ನಲ್ಲಿ ಹೆಸರು ಉಲ್ಲೇಖವಾಗಿದ್ದಕ್ಕೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿ ಜ. 4 ರ ಶನಿವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆಯವರ ಕಲಬುರಗಿ ಮನೆಗೆ ಮುತ್ತಿಗೆ ಹಾಕಲು ಬಿಜೆಪಿ ಮುಂದಾಗಿದೆ.

ಸಚಿವ ಖರ್ಗೆಯವರ ಐವಾನ್‌ ಐ ಷಾಹಿ ಪಬಡಾವಣೆಯಲ್ಲಿರುವ ಲುಂಬಿನಿ ಮನೆಗೆ ಮುತ್ತಿಗೆ ಹಾಕಲು ಕಲಬುರಗಿಗೆ ಶನಿವಾರ ಬಿಜೆಪಿ ರಾಜ್ಯ ನಾಯಕರ ದಂಡೇ ಆಗಮಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎಂಎಲ್‌ಸಿ ಸಿ.ಟಿ ರವಿ, ಎನ್‌. ರವಿ ಕುಮಾರ್‌ ಸೇರಿದಂತೆ ಬಿಜೆಪಿ ನಾಯಕರ ದಂಡು ಶನಿವಾರ ಬೆಳಗ್ಗೆ ಕಲಬುರಗಿಗೆ ಬಂದಿಳಿಯಲಿದೆ.

ಅಂದು ಬೆಳಗ್ಗೆ 10 ಗಂಟೆಗೆ ಜಗತ್ ಸರ್ಕಲ್‌ನಿಂದ ಶುರುವಾಗಲಿರುವ ಬಿಜೆಪಿ ಪ್ರತಿಭಟನೆ ಮುಖ್ಯರಸ್ತೆಯಲ್ಲಿ ಸಾಗಿ ಐವಾನ್‌ ಐ ಷಾಹಿ ಬಡಾವಣೆಯಲ್ಲಿರುವ ಪ್ರಿಯಾಂಕ್‌ ಮನೆಗೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ಬಿಜೆಪಿಯ ಜನನಾಂದೋಲನ ಸಮೀತಿಯ ಪ್ರಧಾನ ಕಾರ್ಯದರ್ಶಿ ಜಗದೀಶ ಹಿರೇಮನಿ ಹೇಳಿದ್ದಾರೆ.

ಈಗಾಗಲೇ 2 ದಿನದಿಂದ ಕಲಬುರಗಿಯಲ್ಲಿ ಠಿಕಾಣಿ ಹೂಡಿರುವ ಜಗದೀಶ ಇವರು ಬಿಜೆಪಿಯ ಮುತ್ತಿಗೆ ಹೋರಾಟ ಸಂಘಟಿಸಲು ಸಿದ್ಧತೆಯಲ್ಲಿ ತೊಡಗಿದ್ದಾರೆ. ಜಿಲ್ಲಾ ಅಧ್ಯಕ್ಷ ಸಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್‌ ಜೊತೆಗೂಡಿ ಪ್ರತಿಭಟನೆಗೆ ಹೆಚ್ಚಿನ ಕಾರ್ಯಕರ್ತರ ಸೇರಿಸುವ ಕೆಲಸವೂ ಸ್ಥಳೀಯ ಬಿಜೆಪಿ ಘಟಕ ನಡೆಸಿದೆ.

ಐವಾನ್ ಏ ಶಾಹಿ ರಸ್ತೆಯಲ್ಲಿರುವ ಪ್ರೀಯಾಂಕ್ ಖರ್ಗೆ ಮನೆಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆಗೆ ನಾವು ಸಜ್ಜಾಗಿದ್ದೇವೆ. ರಾಜ್ಯ ನಾಯಕರೂ ಪಾಲ್ಗೊಳ್ಳುತ್ತಿದ್ದಾರೆ . ಸಚಿವ ಪ್ರೀಯಾಂಕ್ ಖರ್ಗೆ ರಾಜೀನಾಮೆ ನೀಡೋವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಜಗದೀಶ್ ಹಿರೆಮನಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ಸಚಿವ ಪ್ರಿಯಾಂಕ್‌ ಖರ್ಗೆ ಕಲಬುರಗಿ ಮನೆಗೆ ಮುತ್ತಿಗೆ ಹಾಕಲು ಸಿದ್ಧತೆಗಳು ಮಾಡಲಾಗಿದೆ. ರಾಜ್ಯದ ಕೆಲ ನಾಯಕರು ರೈಲು ಮೂಲಕ, ಇನ್ನು ಕೆಲವರು ಹೈದ್ರಾಬಾದ್‌ನಿಂದ ರಸ್ತೆ ಮೂಲಕ ಆಗಮಿಸುತ್ತಿದ್ದಾರೆ. ಗುತ್ತಿಗೆದಾರನ ಸಾವಿಗೆ ಕಾರಣರಾಗಿರುವವರ ವಿರುದ್ಧ ಕ್ರಮಕ್ಕೆ ನಾವು ಆಗ್ರಹಿಸುತ್ತೇವೆ. ಪ್ರಕರಣ ಸಿಬಿಐನಿಂದ ತನಿಖೆಯಾಗಲಿ ಎಂದು ಆಗ್ರಹಿಸುತ್ತೇವೆ.

- ಶಿವರಾಜ ಪಾಟೀಲ್ ರದ್ದೆವಾಡಗಿ, ಜಿಲ್ಲಾಧ್ಯಕ್ಷ, ಬಿಜೆಪಿ, ಕಲಬುರಗಿ