24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳಗಳು ವಿನಾಕಾರಣ ವಿಳಂಬ : ನಿಯಮ ಉಲ್ಲಂಘಿಸಿದರೆ ಎರಡು ವರ್ಷ ಕಂಬಳಕ್ಕೆ ನಿಷೇಧ

| Published : Jan 04 2025, 12:34 AM IST / Updated: Jan 04 2025, 10:50 AM IST

24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳಗಳು ವಿನಾಕಾರಣ ವಿಳಂಬ : ನಿಯಮ ಉಲ್ಲಂಘಿಸಿದರೆ ಎರಡು ವರ್ಷ ಕಂಬಳಕ್ಕೆ ನಿಷೇಧ
Share this Article
  • FB
  • TW
  • Linkdin
  • Email

ಸಾರಾಂಶ

24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳಗಳು ವಿನಾಕಾರಣ ವಿಳಂಬಗೊಳ್ಳುತ್ತಿದ್ದು ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಈ ರೀತಿಯ ಉಲ್ಲಂಘನೆ ಸೂಕ್ತವಾದುದಲ್ಲ. ಈ ನಿಟ್ಟಿನಲ್ಲಿ ನಾವು ಸುಧಾರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

 ಮೂಡುಬಿದಿರೆ :  ಕಂಬಳಗಳಲ್ಲಿ ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡುವ, ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆಯುವ ಪ್ರಕರಣಗಳು ಸಾಬೀತಾದದಲ್ಲಿ ಅಂಥವರಿಗೆ ಮುಂದಿನ ಎರಡು ಕಂಬಳಗಳಿಗೆ ನಿಷೇಧ ವಿಧಿಸಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ ನೀಡಿದೆ.ಒಂಟಿಕಟ್ಟೆಯಲ್ಲಿರುವ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣ ಸಮೀಪದ ಸಭಾಭವನದಲ್ಲಿ ಸಮಿತಿ ಅಧ್ಯಕ್ಷ ಬೆಳಪು ಡಾ. ದೇವಿಪ್ರಸಾದ್‌ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಜಿಲ್ಲಾ ಕಂಬಳ ಸಮಿತಿಯ ತುರ್ತು ಸಭೆಯಲ್ಲಿ ಈ ಕುರಿತು ಸುದೀರ್ಘವಾಗಿ ಚರ್ಚಿಸಿ ಕೆಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.24 ಗಂಟೆಗಳಲ್ಲಿ ಮುಗಿಯಬೇಕಾದ ಕಂಬಳಗಳು ವಿನಾಕಾರಣ ವಿಳಂಬಗೊಳ್ಳುತ್ತಿದ್ದು ಇದು ಸರಕಾರದ ನಿಯಮಗಳಿಗೆ ವಿರುದ್ಧವಾಗಿದೆ. ಈ ರೀತಿಯ ಉಲ್ಲಂಘನೆ ಸೂಕ್ತವಾದುದಲ್ಲ. ಈ ನಿಟ್ಟಿನಲ್ಲಿ ನಾವು ಸುಧಾರಣೆಗೊಳ್ಳದಿದ್ದರೆ ಕಂಬಳ ನಿಷೇಧಕ್ಕೆ ನಾವೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಸಮಯ ಪರಿಪಾಲನೆಯನ್ನು ಕಟ್ಟುನಿಟ್ಟು ಮಾಡಲು ನಿಯಮಗಳನ್ನು ಮತ್ತಷ್ಟು ಬಲಗೊಳಿಸಲಾಗಿದೆ. ಒಬ್ಬ ಓಟಗಾರರನಿಗೆ ಪ್ರತಿ ವಿಭಾಗದಲ್ಲೂ ಒಂದು ಜತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶವಿದೆ. ಅನಿವಾರ್ಯ ಸಂದರ್ಭದಲ್ಲಿ ತೀರ್ಪುಗಾರರ ಹಾಗೂ ವ್ಯವಸ್ಥಾಪಕರ ಅನುಮತಿ ಪಡೆದ ಬಳಿಕ ಮಾತ್ರ ಎರಡು ಜತೆ ಕೋಣಗಳನ್ನು ಓಡಿಸಬಹುದು. ಉಳಿದಂತೆ ನಿಯಮಗಳಲ್ಲಿ ಸಡಿಲಿಕೆ ಇಲ್ಲ ಎಂದು ಅವರು ವಿವರಿಸಿದರು.ಆ್ಯಂಬುಲೆನ್ಸ್, ಪ್ರಥಮ ಚಿಕಿತ್ಸೆ ಕೇಂದ್ರ ಕಡ್ಡಾಯ: ಕೋಣಗಳ ಯಜಮಾನ ತ್ರಿಶಾಲ್ ಪೂಜಾರಿ ಮಾತನಾಡಿ, ಮೂಲ್ಕಿಯಲ್ಲಿ ನಡೆದ ಕಂಬಳದಲ್ಲಿ ನಮ್ಮ ಓಟಗಾರನ ಕಾಲಿಗೆ ಬಲವಾದ ಪೆಟ್ಟಾಗಿ ರಿಕ್ಷಾದಲ್ಲಿ ಆಸ್ಪತ್ರೆಗೆ ಆಟೋದಲ್ಲಿ ಸಾಗಿಸಲಾಗಿತ್ತು. ಇಂತಹ ತುರ್ತು ಸಂದರ್ಭದಲ್ಲಿ ಕಂಬಳ ಆಯೋಜಕರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು. ಆ್ಯಂಬುಲೆನ್ಸ್ ಹಾಗೂ ಪ್ರಥಮ ಚಿಕಿತ್ಸೆ ಕೇಂದ್ರವನ್ನು ಎಲ್ಲ ಕಂಬಳಗಳಲ್ಲಿ ಕಡ್ಡಾಯಗೊಳಿಸಲಾಗುವುದು ಎಂದು ಸಮಿತಿ ಅಧ್ಯಕ್ಷರು ಹೇಳಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್, ಕಂಗಿನಮನೆ, ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳು, ಉಪಾಧ್ಯಕ್ಷ ರಶಿತ್ ಶೆಟ್ಟಿ, ತೀರ್ಪುಗಾರ ರಾಜೀವ್ ಶೆಟ್ಟಿ ಎಡೂರು, ಅಡ್ಡೆ ಕಂಬಳದ ವ್ಯವಸ್ಥಾಪಕ ಕೊಳಚೂರು ಕೊಂಡೊಟ್ಟುಸುಕುಮಾರ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.