ವಕ್ಫ್ ಆಸ್ತಿ ಒತ್ತುವರಿ ವಿವಾದ ಖಂಡಿಸಿ ಕೋಲಾರದಲ್ಲಿ ಬಿಜೆಪಿ ಪ್ರತಿಭಟನೆ

| Published : Nov 23 2024, 12:30 AM IST

ಸಾರಾಂಶ

ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ತಾಲೂಕು ದಂಡಾಧಿಕಾರಿ ಧೋರಣೆ ಖಂಡಿಸಿ "ನಮ್ಮ ಭೂಮಿ ನಮ್ಮ ಹಕ್ಕು " ಎಂಬ ಧ್ಯೇಯ ವಾಕ್ಯದೊಂದಿಗೆ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿ ವಿವಾದವನ್ನು ಖಂಡಿಸಿ ಜಿಲ್ಲಾ ಭಾರತಿಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.ನಗರದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ತಾಲೂಕು ದಂಡಾಧಿಕಾರಿ ಧೋರಣೆ ಖಂಡಿಸಿ "ನಮ್ಮ ಭೂಮಿ ನಮ್ಮ ಹಕ್ಕು " ಎಂಬ ಧ್ಯೇಯ ವಾಕ್ಯದೊಂದಿಗೆ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಕ್ಫ್ ಆಸ್ತಿ ವಿವಾದ ಬುಗೆಲೆದಿದ್ದು, ಕೋಲಾರದಲ್ಲಿ ಅಕ್ರಮವಾಗಿ ವಕ್ಫ್ ಆಸ್ತಿಯೆಂದು ಮಠ ಮಾನ್ಯಗಳ ಜಮೀನುಗಳು ಸೇರಿದಂತೆ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಮುಂದಾಗಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತ ಪಡಿಸಿದರು. ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ವಕ್ಫ್ ಬೋರ್ಡ್‌ನನ್ನು ಸ್ಥಾಪನೆ ಮಾಡಿದ್ದು, ಇಂದು ರೈತ, ದಲಿತರ, ಬಡವರ, ಸರ್ಕಾರಿ ಶಾಲೆ, ಮಠಮಾನ್ಯಗಳ ಆಸ್ತಿ ಕಬಳಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ದೇಶದ ಪ್ರಧಾನಿ ನರೇಂದ್ರ ಮೋದಿ ಚಳಿಗಾಲದಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿಗೆ ಆಗ್ರಹಿಸಿದರು.ಕೋಲಾರದ ಜಿಲ್ಲಾಧಿಕಾರಿ ವಕ್ಫ್ ಬೋರ್ಡ್‌ಗೆ ರೈತರ ಮತ್ತು ಸರ್ಕಾರಿ ಶಾಲೆಯ ಜಾಗವನ್ನು ಸೇರಿಸಿದ್ದಾರೆ. ಎಲ್ಲಿ ಯಾವ ಜಮೀನನ್ನು ವಕ್ಫ್ ಬೋರ್ಡ್‌ಗೆ ಡಿಸಿ ವರ್ಗ ಮಾಡಿದ್ದಾರೆ ಎಂದು ನಮ್ಮೊಂದಿಗೆ ಬಂದರೆ ಜಾಗವನ್ನು ಗುರುತಿಸಿ ನೀಡಲಾಗುತ್ತದೆ. ಜಿಲ್ಲೆಗೆ ಬಂದಿರುವ ಡಿಸಿ ಅಕ್ರಂಪಾಷ ಅಧಿಕಾರ ದುರುಪಯೋಗಪಡಿಸಿಕೊಂಡು, ಸಂವಿಧಾನದಡಿಯಲ್ಲಿ ಕಾನೂನು ಬಾಹಿರವಾಗಿ ಕರ್ತವ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಬಿಜೆಪಿ ಅಧಿಕಾರದಲ್ಲಿ ಕೋಲಾರದ ಪ್ರಮುಖ ವೃತ್ತಗಳಲ್ಲಿ ರಸ್ತೆ ಅಗಲೀಕರಣ ವಿಚಾರದಲ್ಲಿ ಇಲ್ಲಿನ ಕಠಾರಿ ಗಂಗಮ್ಮ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ, ಕನಕದಾಸರ ಸಮುದಾಯ ಭವನ ಜಾಗದಲ್ಲಿ ರಸ್ತೆಗೆ ನೀಡಿದ್ದು, ಇದುವರೆಗೂ ಸಹ ಸೂಕ್ತವಾದ ಬದಲಿ ಜಾಗ ನೀಡಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ, ಆದರೆ ಕೋಲಾರದ ಜಿಲ್ಲಾಧಿಕಾರಿ ಅಕ್ರಂ ಪಾಷ ಒಂದು ಸಮುದಾಯದ ಓಲೈಕೆದಿಂದಾಗಿ ಸರ್ಕಾರಿ ಜಾಗ ರೈತರ ಜಾಗವನ್ನು ಹೊಸ ಬೋರ್ಡ್‌ಗೆ ನೀಡಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿ ನನ್ನ ಅವಧಿಯಲ್ಲಿ ಹೆಚ್ಚಿನ ಜಾಗವನ್ನು ಅಂಗನವಾಡಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂದು ಹೇಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಗರಣಗಳ ಸರಮಾಲೇಯನ್ನೇ ಹೊತ್ತಿದೆ. ಮುಡಾದಲ್ಲಿ ನಿವೇಶಗಳು, ವಾಲ್ಮೀಕಿ ಅಭಿವೃದ್ಧಿ ಅನುದಾನ, ಅಂಬೇಡ್ಕರ್ ನಿಗಮದಲ್ಲಿ ಎಸ್.ಸಿ., ಎಸ್.ಟಿ ಅಭಿವೃದ್ಧಿಯ ಅನುದಾನ ದುರ್ಬಳಕೆ ಈಗ ಗ್ಯಾರಂಟಿ ಈಡೇರಿಸುವ ಭರವಸೆಯಿಂದ ತಪ್ಪಿಸಿಕೊಳ್ಳಲು ಬಡವರಿಗೆ ನೀಡಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿ ಜನ ವಿರೋಧಿ ಆಡಳಿತಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಮಾತನಾಡಿ, ಈ ಹಿಂದೆ ಮಹಾರಾಜರ ಆಳ್ವಿಕೆಯಲ್ಲಿ ನೀಡಿದಂತ ಆಸ್ತಿ ಬಿಡದಂತೆ ಸಣ್ಣ ಪುಟ್ಟ ರೈತರ ಜಮೀನು, ಮಠ, ಮಾನ್ಯಗಳು, ಕಲ್ಯಾಣಿಗಳು, ಕೆರೆ ಕುಂಟೆಗಳು, ಗೋಮಾಳ ಬಿಡದಂತೆ ಎಲ್ಲವನ್ನು ವಕ್ಫ್ ಹೆಸರಿನ ಲ್ಯಾಂಡ್ ಜಿಹಾದ್ ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 1,600 ಎಕರೆ ಜಮೀನನ್ನು ವಕ್ಪ್ ಬೋರ್ಡ್‌ಗೆ ಪರಭಾರೆ ಮಾಡಲಾಗಿದೆ. ಈ ಹಿಂದೆ ಅರಣ್ಯ ಇಲಾಖೆ ಹೆಸರಿನಲ್ಲಿ ಕಸಿದಿದ್ದ ಬೆನ್ನ ಹಿಂದೆಯೇ ವಕ್ಫ್ ಬೋರ್ಡ್ ಹೆಸರಿನಲ್ಲಿ ದರೋಡೆ ಮಾಡಲಾಗುತ್ತಿದೆ. ಇದರ ವಿರುದ್ದ ಬೃಹತ್ ಮಟ್ಟದ ಹೋರಾಟ ಮಾಡದಿದಗದರೇ ನಮಗೆ ಉಳಿಗಾಲವಿಲ್ಲ ಎಂಬುವುದನ್ನು ಹಿಂದೂ ಸಮುದಾಯದವರು ಅರಿಯುವಂತಾಗ ಬೇಕು ಎಂದರು.ವಕೀಲ ಸುಬ್ಮಣ್ಯ, ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ವಾಸುದೇವರಾವ್, ಮಾಜಿ ಶಾಸಕ ವೆಂಕಟಮುನಿಯಪ್ಪ, ಜಿ.ಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಕೆ.ಯು.ಡಿ.ಎ ಮಾಜಿ ಅಧ್ಯಕ್ಷರಾದ ವಿಜಯ ಕುಮಾರ್, ಓಂಶಕ್ತಿ ಚಲಪತಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ನಿವೃತ್ತ ಡಿವೈಎಸ್‌ಪಿ ಪಿ.ಶಿವಕುಮಾರ್, ಸುಗಟೂರು ಚಂದ್ರ ಶೇಖರ್, ಹಾರೋಹಳ್ಳಿ ವೆಂಕಟೇಶ್, ನಿವೃತ್ತ ಶಿಕ್ಷಕ ನರಸಿಂಹಯ್ಯ, ನಾಮಾಲ್ ಮಂಜುನಾಥ, ಕೃಷ್ಣಮೂರ್ತಿ, ಬಾಲಾಜಿ, ಮಂಜುನಾಥ್, ಓಹಿಲೇಶ್, ರಾಜೇಶ್‌ಸಿಂಗ್, ಪ್ರವೀಣ್ ಗೌಡ, ಮಮತಮ್ಮ, ಅರುಣಮ್ಮ, ಮು.ರಾಘವೇಂದ್ರ, ಗೋವಿಂದಸ್ವಾಮಿ ಇದ್ದರು.ಫೋಟೋ: ರಾಜ್ಯದಲ್ಲಿ ವಕ್ಫ್ ಆಸ್ತಿ ಒತ್ತುವರಿ ವಿವಾದವನ್ನು ಖಂಡಿಸಿ ಜಿಲ್ಲಾ ಭಾರತಿಯ ಜನತಾ ಪಕ್ಷದ ವತಿಯಿಂದ ಕೋಲಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.