ಸಾರಾಂಶ
ಕಾಂಗ್ರೆಸ್ ಸರ್ಕಾರ ರೈತರ, ಜನಸಾಮಾನ್ಯರ, ಹಿಂದೂಗಳ ವಿರೋಧಿಯಾಗಿ ಸರ್ವ ವಿಧದಲ್ಲೂ ಆಡಳಿತ ನಡೆಸಲು ವಿಫಲವಾಗಿದೆ. ಹೈನುಗಾರರಿಗೆ ನೀಡಲಾಗುತ್ತಿದ್ದ ಸಹಾಯಧನ ಸ್ಥಗಿತಗೊಳಿಸಿ ೮ ತಿಂಗಳೇ ಕಳೆದಿದೆ.
ಯಲ್ಲಾಪುರ:
ಕಾಂಗ್ರೆಸ್ ಸರ್ಕಾರ ರೈತರ, ಜನಸಾಮಾನ್ಯರ, ಹಿಂದೂಗಳ ವಿರೋಧಿಯಾಗಿ ಸರ್ವ ವಿಧದಲ್ಲೂ ಆಡಳಿತ ನಡೆಸಲು ವಿಫಲವಾಗಿದೆ. ಹೈನುಗಾರರಿಗೆ ನೀಡಲಾಗುತ್ತಿದ್ದ ಸಹಾಯಧನ ಸ್ಥಗಿತಗೊಳಿಸಿ ೮ ತಿಂಗಳೇ ಕಳೆದಿದೆ. ಇದರಿಂದ ಹೈನುಗಾರರಿಗೆ ಜಮಾ ಆಗಬೇಕಿದ್ದ ₹ ೭೦೦ ಕೋಟಿ ಹಣ ಬಂದಿಲ್ಲ. ತಕ್ಷಣ ಈ ಹಣ ಬಿಡುಗಡೆಗೊಳಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎನ್. ಹೆಗಡೆ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳವಾರ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಚುನಾವಣೆ ಹತ್ತಿರ ಬಂದಾಗ ಹಿಂದೂ ಕಾರ್ಯಕರ್ತರನ್ನು ಅನ್ಯ ಕಾರಣ ನೀಡಿ ಜೈಲಿಗೆ ಕಳುಹಿಸಿ, ಬಿಜೆಪಿ ಕಾರ್ಯಕರ್ತರನ್ನು ದಮನ ಮಾಡುವ ಕಾಂಗ್ರೆಸ್ ನೀತಿ ಖಂಡಿಸುತ್ತೇವೆ. ಅಲ್ಲದೇ ರಾಜ್ಯಾದ್ಯಂತ ತೀವ್ರ ಬರಗಾಲ ಉಂಟಾಗಿದೆ. ಜನ, ಜಾನುವಾರುಗಳಿಗೂ ತಿನ್ನಲು ಆಹಾರ, ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ವಿರುದ್ಧ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನಡೆಸುತ್ತಿರುವ ಕುತಂತ್ರಗಳನ್ನು ಬಿಜೆಪಿ ಖಂಡಿಸುತ್ತದೆ. ಕಾಂಗ್ರೆಸ್ ಧೋರಣೆ ಜನರ ದಿಕ್ಕು ತಪ್ಪಿಸುವ ತಂತ್ರಗಾರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ೫ ಗ್ಯಾರಂಟಿ ಘೋಷಿಸಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಯಾವುದನ್ನೂ ಸಮರ್ಥವಾಗಿ ನಿಭಾಯಿಸಲಾಗದೇ ಕೇಂದ್ರ ಸರ್ಕಾರದ ಸಾಧನೆಗಳ ವಿರುದ್ಧ ಸುಳ್ಳು ಸೃಷ್ಟಿಸಿದೆ. ಪ್ರತಿಭಟನೆ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸಲು ಮುಂದಾಗಿದೆ. ಕಾಂಗ್ರೆಸ್ ಸರ್ಕಾರದ ಮೊದಲ ಯೋಜನೆಯಾದ ಶಕ್ತಿ ಯೋಜನೆಯ ಸ್ಥಿತಿ ಹೀನಾಯವಾಗಿದೆ. ಕಂಡಕಂಡಲ್ಲಿ ಬಸ್‌ಗಳು ನಿಲ್ಲುತ್ತಿವೆ. ದುರಸ್ತಿಗೆ ಹಣವಿಲ್ಲ, ಟೈರ್‌ಗಳಿಲ್ಲ, ಸಿಬ್ಬಂದಿಗಳಿಗೆ ಸಮಯಕ್ಕೆ ಸರಿಯಾಗಿ ಸಂಬಳ ಬರುತ್ತಿಲ್ಲ. ಹಾಗೆಯೇ ಗೃಹಲಕ್ಷ್ಮೀ ಯೋಜನೆಯ ಹಣವೂ ಎಲ್ಲರಿಗೂ ತಲುಪುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಸರ್ಕಾರ ಎಟಿಎಂ ಆಗಿದೆ ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರಿಗೆ ₹ ೧೦ ಸಾವಿರ ಕೋಟಿ ಕೊಡುತ್ತೇನೆ, ಹಜ್ ಭವನಕ್ಕೆ ₹ ೫೦೦ ಕೋಟಿ ಘೋಷಿಸಿ, ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ. ಹಿಂದುಳಿದ ಜನಾಂಗದ ನಾಯಕರು ಎಂದು ಸಮ್ಮೇಳನ ನಡೆಸಿಯೂ ರೈತರಿಗೆ ಯಾವುದೇ ಸೌಲಭ್ಯ ನೀಡದೇ ಮೋಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ದಾಂಡೇಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ನೀರು, ರಸ್ತೆ ಮುಂತಾದ ಯಾವುದೇ ಅಭಿವೃದ್ಧಿ ಇಲ್ಲದೇ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ ನಾಯ್ಕ, ಗುರುಪ್ರಸಾದ ಹೆಗಡೆ, ಶಿವಾಜಿ ನರಸಾಮಿ, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ, ಪ್ರಮುಖರಾದ ರಾಮು ನಾಯ್ಕ, ವೆಂಕಟರಮಣ ಬೆಳ್ಳಿ, ಪ್ರಸಾದ ಹೆಗಡೆ, ರಾಮಚಂದ್ರ ಚಿಕ್ಯಾನಮನೆ, ಸುಬ್ಬಣ್ಣ ಬೋಳ್ಮನೆ, ಶಿವಲಿಂಗಯ್ಯ ಅಲ್ಲಯ್ಯನಮಠ, ಶ್ರೀನಿವಾಸ ಗಾಂವ್ಕರ, ಪ್ರದೀಪ ಯಲ್ಲಾಪುರಕರ, ಸೋಮೇಶ್ವರ ನಾಯ್ಕ, ಹಳಿಯಾಳ ಮಂಡಲಾಧ್ಯಕ್ಷ ಗಣಪತಿ ಕರಂಜೇಕರ, ಅನಿಲ ಮುತ್ನಾಳ, ವಿನೇಶ ಭಟ್ಟ, ವಿನೋದ ತಳೇಕರ, ರವಿ ದೇವಳಿಗೆ, ವಿಶ್ವನಾಥ ಹಳೆಮನೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.