ಸಾರಾಂಶ
ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ದರ ಶೇ.೧೫ ರಷ್ಟು ಹೆಚ್ಚಿಸಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ದರ ಶೇ.೧೫ ರಷ್ಟು ಹೆಚ್ಚಿಸಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಒದಗಿಸಿ ಪುರುಷ ಪ್ರಯಾಣಿಕ ದರ ಹೆಚ್ಚಳ ಮಾಡಿ ಪುರುಷರ ಕಿವಿಗೆ ಹೂ ಇಡುವ ಕೆಲಸ ಮಾಡಿದೆ ಎಂದು ಘೋಷಣೆ ಕೂಗಿ ಪುರುಷ ಪ್ರಯಾಣಿಕರಿಗೆ ಗುಲಾಬಿ ನೀಡಿ ಸರ್ಕಾರದ ಪ್ರಯಾಣ ದರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ರಾಜ್ಯ ಸರ್ಕಾರ ಬಡವರು, ಮಧ್ಯಮ ವರ್ಗದ ಜನರ ಪಾಲಿಗೆ ಸತ್ತು ಹೋಗಿದೆ. ಸರ್ಕಾರ ಅಧಿಕಾರ ಬಂದು ೨ ವರ್ಷಗಳ ಹತ್ತಿರವಾಗುತ್ತಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಏನು ಇಲ್ಲ. ಈ ಸರ್ಕಾರ ಬಡವರ ಮತವನ್ನು ಖರೀದಿ ಮಾಡಿಕೊಳ್ಳಲು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಆಗದೆ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣ ಬಳಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ನಡೆಸುತಿದ್ದಾರೆ ಎಂದು ದೂರಿದರು.ಎಸ್ಸಿ, ಎಸ್ಟಿಗಳ ಟಿಎಸ್‌ಪಿ, ಎಸ್‌ಇಪಿ ಯೋಜನೆಗಳ ಹಣ, ಅಂಗವಿಕಲರ ಕಲ್ಯಾಣ ಹಣ ಸೇರಿದಂತೆ ಸುಮಾರು ೩೦ ಸಾವಿರ ಕೋಟಿ ರು. ಹಣವನ್ನು ದುರುಪಯೋಗ ಮಾಡಿಕೊಂಡು ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಕೂಡ ಕುಂಟುತ್ತಾ, ಕುಂಟುತ್ತಾ ನಡೆಯುತ್ತಿದೆ. ಈ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಿಕೊಳ್ಳಲು ಆಗದೆ ಸಾರ್ವಜನಿಕರಿಂದ ಲೂಟಿ ಮಾಡಲು ಶುರು ಮಾಡಿದೆ. ೨೮ ಸಾವಿರ ಕೋಟಿ ಆದಾಯವನ್ನು ಅಬಕಾರಿ ಬಾಬ್ತಿನಲ್ಲಿ ಸಂಗ್ರಹ ಮಾಡಬೇಕಾಗಿದ್ದು ಈಗ ೩೬ ಸಾವಿರ ಕೋಟಿ ಸಂಗ್ರಹ ಮಾಡುವಂತೆ ಹೇಳಿದೆ. ಸಿದ್ದರಾಮಯ್ಯನವರು ಬಡವರು, ಮಧ್ಯಮವರ್ಗದವರು, ಸಾರ್ವಜನಿಕರು, ತಲೆ ಹೊಡೆದು ಗ್ಯಾರಂಟಿ ನಿಭಾಯಿಸುತ್ತಿದ್ದಾರೆ ಕಿಡಿಕಾರಿದರು.ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಶಕ್ತಿ ಎಂದು ಬೋಗಳೆ ಬಿಡುತಿದ್ದರು. ಆದಾಯ ಹೆಚ್ಚಳವಾಗಿದೆ ಎಂದರು. ಇದು ಹಸಿಹಸಿ ಸುಳ್ಳು ಎಂಬುದುಕ್ಕೆ ಬಸ್ ದರ ಹೆಚ್ಚಳವೇ ಒಂದು ನಿದರ್ಶನವಾಗಿದೆ. ಹೆಂಡ್ತಿಗೆ ೨ ಸಾವಿರ ಕೊಡಲು ಗಂಡನ ಜೇಬಿನಿಂದ ಕಸಿದುಕೊಳ್ಳುತ್ತೀರಿ ಸಿದ್ದರಾಮಯ್ಯನವರೇ. ನಿಮಗೆ ನಾಚಿಕೆ, ಮಾನಮರ್ಯಾದೆ ಇಲ್ಲ ನಿಮ್ಮ ಸರ್ಕಾರದಲ್ಲಿ ಶೋಕಿ ಮಾಡುವವರು ಮಾಡುತ್ತಿದ್ದಾರೆ. ನಿಮ್ಮ ದುರಾಡಳಿತವನ್ನು ಜನರು ನೋಡುತ್ತಿದ್ದಾರೆ. ಮುಂದೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಸಹ ವಕ್ತಾರ ರಾಮಸಮುದ್ರ ಶಿವಣ್ಣ, ಜಿಲ್ಲಾ ಕಾರ್ಯದರ್ಶಿ ನಟರಾಜು, ಮಾಜಿ ಅಧ್ಯಕ್ಷ ಆರ್.ಸುಂದರ್, ನಗರ ಮಂಡಲ ಅಧ್ಯಕ್ಷ ಶಿವರಾಜ್, ಪ್ರಧಾನ ಕಾರ್ಯದರ್ಶಿಗಳಾದ ಕೂಸಣ್ಣ, ಮಹೇಶ್, ಬಾಲಸುಬ್ರಹ್ಮ, ಸೂರ್ಯ, ಆನಂದ್ ಭಗೀರಥ, ಸಾಗಡೆ ಗುರುಪ್ರಸಾದ್ ಮೂಡಹಳ್ಳಿ ಮೂರ್ತಿ, , ಚಂದ್ರು ಬುಲೆಟ್, ಶಿವಯ್ಯ, ನಗರಸಭಾ ಸದಸ್ಯ ಮನೋಜ್‌ಪಟೇಲ್, ಮುಖಂಡ ಚಂದ್ರಶೇಖರ್, ಶಿವಣ್ಣ ವೀರೇಂದ್ರ. ರಾಮಸಮುದ್ರ ಶಿವಣ್ಣ, ಮಣಿಕಂಠ. ರಾಜೇಂದ್ರ ಸುದರ್ಶನ್ ಆಳ್ವ. ಭಾಸ್ಕರ್ ಇತರರು ಭಾಗವಹಿಸಿದ್ದರು.