ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Feb 24 2024, 02:31 AM IST

ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆಡೆ ಬಳಕೆ ಮಾಡಿಕೊಂಡು ದಲಿತ ಸಮುದಾಯದವರಿಗೆ ಸಿಗಬೇಕಾದ ಎಸ್ಸಿಪಿ, ಟಿಎಸ್‌ಪಿ ಹಣವನ್ನು ಹಿಂಪಡೆದಿರುವುದನ್ನು ಖಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ವತಿಯಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗದಗ: ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆಡೆ ಬಳಕೆ ಮಾಡಿಕೊಂಡು ದಲಿತ ಸಮುದಾಯದವರಿಗೆ ಸಿಗಬೇಕಾದ ಎಸ್ಸಿಪಿ, ಟಿಎಸ್‌ಪಿ ಹಣವನ್ನು ಹಿಂಪಡೆದಿರುವುದನ್ನು ಖಂಡಿಸಿ ಶುಕ್ರವಾರ ಜಿಲ್ಲಾ ಬಿಜೆಪಿ ವತಿಯಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಕಳೆದ ಒಂಭತ್ತು ತಿಂಗಳಲ್ಲಿ ಕಾಂಗ್ರೆಸ್ ಆಡಳಿತವು ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿಯನ್ನು ತೋರಿ ದಲಿತ ಸಮುದಾಯವನ್ನು ವಂಚಿಸುತ್ತಿದ್ದಾರೆ ಆರೋಪಿಸಿದರು. ದಲಿತರಿಗೆ ಮೀಸಲಿಟ್ಟಿದ್ದ ₹ 11144 ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿ ದಲಿತ ಬಾಂಧವರನ್ನು ಬಲಿಕೊಟ್ಟು ತಮ್ಮ ಸ್ವಾರ್ಥ ಸಾಧನೆ ಪೂರೈಸಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ಡೋಂಗಿ ದಲಿತ ಕಾಳಜಿ ಬಯಲಾಗಿದೆ. ದಲಿತರ ಹಿತ ರಕ್ಷಣೆ ಮಾಡಬೇಕಿದ್ದ ಸಮಾಜಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಈ ಅನ್ಯಾಯದ ವಿರುದ್ಧ ಸೊಲ್ಲೆತ್ತದೆ ಕಾಂಗ್ರೆಸ್ ಪಾರ್ಟಿಯ ಹಿತಕ್ಕೆ ದಲಿತ ಸಮುದಾಯದ ಹಿತವನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.ಸಿಎಂ ಸಿದ್ದರಾಮಯ್ಯನವರಿಗೆ ಅಲ್ಪಸಂಖ್ಯಾತರಿಗೆ ₹ 10 ಸಾವಿರ ಕೋಟಿ ಕೊಡಲು ಯಾವ ಗ್ಯಾರಂಟಿಯೂ ಅಡ್ಡ ಬಂದಿಲ್ಲ. ಇವರಿಗೆ ದಲಿತರ ಹಿತಾಸಕ್ತಿಗಿಂತ ಓಟು ಬ್ಯಾಂಕ್ ರಾಜಕಾರಣವು ಸರ್ಕಾರಕ್ಕೆ ಆದ್ಯತೆಯಾಗಿದೆ. ಮೊರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವು ಇತರ ಯೋಜನೆಗಳಿಗೆ ಬಳಕೆಯಾಗಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.ಇದಲ್ಲದೆ ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣವು ಕೂಡಾ ದುರ್ಬಳಕೆಯಾಗಿ ಉನ್ನತ ಶಿಕ್ಷಣದಿಂದ ದಲಿತ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರು ಬಾಯಿ ತೆಗೆದರೆ ದಲಿತ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ಮಾತನಾಡುವುದಕ್ಕೆ ಮಾತ್ರ ಅವರ ಹಿತಾಸಕ್ತಿಯನ್ನು ಸೀಮಿತಗೊಳಿಸಿದ್ದಾರೆ ಎಂದರು.ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆಸಕ್ತಿಯಿಲ್ಲದಂತಾಗಿದೆ. ರಸ್ತೆ ಬದಿಯ ವ್ಯಾಪಾರಿಗಳಿಗೆ ಕೇಂದ್ರ ಸರಕಾರದ ಸ್ವ-ನಿಧಿ ಯೋಜನೆಗೆ ರಾಜ್ಯ ಸರ್ಕಾರವು ದಲಿತ ಉದ್ಯಮಿಗಳಿಗೆ ಪ್ರೋತ್ಸಾಹಧನವಾಗಿ ಬಡ್ಡಿಯಲ್ಲಿ ಪಾಲು ಕೊಡಬಹುದಿತ್ತು. ಆದರೆ ಅದರ ಕಡೆ ಗಮನವೇ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಮುದ್ರಾ ಯೋಜನೆಯಲ್ಲಿ ದಲಿತರಿಗೆ ಸ್ವಯಂ ಉದ್ಯೋಗ ನೀಡಲು ಉತ್ತೇಜನ ಕೊಡುತ್ತಿದೆ ಎಂದರು. ಆದರೆ ರಾಜ್ಯ ಸರಕಾರ ದಲಿತ ಉದ್ಯಮದಾರರನ್ನು ರೂಪಿಸಲು ಮತ್ತು ಉತ್ತೇಜಿಸಲು ಯಾವುದೇ ಆಸಕ್ತಿವಹಿಸಿಲ್ಲ ಮತ್ತು ಯಾವುದೇ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ಘೋಷಿಸಿಲ್ಲಾ ಎಂದು‌ ಆರೋಪಿಸಿದರು ಬಿಜೆಪಿ ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಫಕೀರೇಶ ರಟ್ಟಿಹಳ್ಳಿ ಮುಂತಾದವರು ಮಾತನಾಡಿದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಈಶ್ವರಪ್ಪ ನಾಯ್ಕರ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ, ಲಕ್ಷ್ಮಣ ದೊಡ್ಡಮನಿ, ಶಿವು ಹಿರೇಮನಿಪಾಟೀಲ, ನಾಗರಾಜ ತಳವಾರ, ಗೋವಿಂದರಾಜ ಪೂಜಾರ, ದೇವಪ್ಪ ಇಟಗಿ, ಶಶಿಧರ ದಿಂಡೂರ, ಇರ್ಷಾದ ಮಾನ್ವಿ, ಮುತ್ತು ಮುಶಿಗೇರಿ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಮಲ್ಲು ಮಾದರ, ಸುರೇಶ ಚಲವಾದಿ, ನಿರ್ಮಲಾ ಕೊಳ್ಳಿ, ವಾಯ್.ಪಿ.ಅಡ್ನೂರ, ವಿಜಯಲಕ್ಷ್ಮಿ ಮಾನ್ವಿ, ರೇಖಾ ಬಂಗಾರಶೆಟ್ಟರ, ಬೂದಪ್ಪ ಹಳ್ಳಿ, ನವೀನ ಕೊಟೆಕಲ್, ರಾಹುಲ ಸಂಕಣ್ಣವರ, ಪದ್ಮಾ ಮುತ್ತಲದಿನ್ನಿ, ಗಂಗಾಧರ ಹಬೀಬ, ವಿನಾಯಕ ಮಾನ್ವಿ, ಮಂಜುನಾಥ ವಡ್ಡರ, ಮಾರುತಿ ಮ್ಯಾಗೇರಿ, ಶರಣು ಚಲವಾದಿ, ಶಿವಾನಂದ ಮಾದರ, ಮುದಿಯಪ್ಪ ದಾಣಿ, ಪ್ರವೀಣ ವಡ್ಡರ ಮುಂತಾದವರು ಹಾಜರಿದ್ದರು.