ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಾಂಗ್ರೆಸ್ ಪಕ್ಷ ಗೂಂಡಾಗಿರಿ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನವನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನವನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಶುಕ್ರವಾರ ಪಾದಯಾತ್ರೆ ಮೂಲಕ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಡಳಿತ ಭವನ ತಲುಪಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಹಾಗೂ ಕಾಕ್ರೋಚ್ ಪಾರ್ಟಿ ಗುಂಡೂಗಿರಿ ಮಾಡುತ್ತಿವೆ ಎಂದು ಆರೋಪಿಸಿ, ಕಾಂಗ್ರೆಸ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಯಾವುದೇ ಸೂಕ್ತ ವೇದಿಕೆ ಇಲ್ಲದೆ ಈ ಹಿಂದೆ ಹಲವು ಬಾರಿ ವಿಫಲ ಯತ್ನಗಳನ್ನು ನಡೆಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈಗ ಮೊತ್ತೊಮ್ಮೆ ಹತಾಶೆಯಿಂದ ಉದ್ಧಟತನದ ರಾಜಕೀಯಕ್ಕೆ ಕೈ ಹಾಕಿದ್ದಾರೆ. ಲಡಾಖ್‌ನಿಂದ ನವದೆಹಲಿಗೆ ಬಂದು ಶಾಂತಿಯುತವಾಗಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ನಡೆಸಲು ಬಂದಿದ್ದ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ವೇದಿಕೆಯನ್ನು ಕಾಂಗ್ರೆಸ್ ಹಾಗೂ ಕಾಕ್ರೋಜ್ ಪಾರ್ಟಿ ದುರ್ಬಳಿಕೆ ಮಾಡಿಕೊಳ್ಳಲು ಯತ್ನಿಸಿವೆ ಎಂದು ಕಿಡಿಕಾರಿದರು.ಹೋರಾಟ ಸ್ಥಳಕ್ಕೆ ಕಾಂಗ್ರೆಸ್ ತನ್ನ ಗೂಂಡಾಗಳನ್ನು ಕರೆತಂದು ರಾದ್ದಾಂತ ಸೃಷ್ಟಿಸಲು ಯತ್ನಿಸಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿಯೇ ಸ್ವತಃ ಪ್ರಕಟಣೆ ನೀಡಿ, ಇದು ನಮ್ಮ ಪ್ರತಿಭಟನೆಯಲ್ಲ, ಹೊರಗಿನಿಂದ ಗೂಂಡಾಗಳನ್ನು ಕರೆತರಲಾಗಿದೆ. ಹಾಗಾಗಿ, ನಾವು ಈ ಪ್ರತಿಭಟನೆಯನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾಗಿ ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಬಿಜೆಪಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಬಸವರಾಜ ಯಂಕಂಚಿ, ಡಾ.ಶೇಖರ ಮಾನೆ, ಶಾಂತಾಬಾಯಿ ಗೋಣಿ, ಮಲ್ಲಯ್ಯ ಮೂಗನೂರಮಠ, ಪ್ರಭು ಹಡಗಲಿ, ಅಶೋಕ ಲಿಂಬಾವಳಿ, ಯಲ್ಲಪ್ಪ ಬೆಂಡಿಗೇರಿ, ಶಶಿಕಲಾ ಮಜ್ಜಗಿ, ವೀರಣ್ಣ ಹಳೇಗೌಡರ, ಬಸವರಾಜ ಹುನಗುಂದ ಸೇರಿದಂತೆ ಅನೇಕರು ಹಾಜರಿದ್ದರು.