ಬಾಣಂತಿಯರು, ಮಕ್ಕಳ ಸಾವು ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Jan 07 2025, 12:15 AM IST

ಬಾಣಂತಿಯರು, ಮಕ್ಕಳ ಸಾವು ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾವನ್ನಪ್ಪಿದ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಆ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಸರ್ಕಾರ ನಿಯಮಾವಳಿ ರೂಪಿಸಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಭದ್ರತೆಯನ್ನು ಒದಗಿಸುವುದು. ಇದನ್ನು ಖಾತ್ರಿಪಡಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ಮಕ್ಕಳ ಸರಣಿ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದ್ದು, ಕೂಡಲೇ ಸಾವನ್ನಪ್ಪಿದ ಬಾಣಂತಿಯರ ಕುಟುಂಬಕ್ಕೆ ೨೫ ಲಕ್ಷ ರು. ಪರಿಹಾರ ನೀಡುವಂತೆ ಒತ್ತಾಯಿಸಿ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಆರೋಗ್ಯ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಸಾವನ್ನಪ್ಪಿದ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಆ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಸರ್ಕಾರ ನಿಯಮಾವಳಿ ರೂಪಿಸಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಭದ್ರತೆಯನ್ನು ಒದಗಿಸುವುದು. ಇದನ್ನು ಖಾತ್ರಿಪಡಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸುವಂತೆ ಆಗ್ರಹಿಸಿದರು.

ಬಾಣಂತಿಯರ ಸಾವಿಗೆ ನೈಜ ಕಾರಣಗಳನ್ನು ತಿಳಿದು ಅದನ್ನು ನಿಯಂತ್ರಿಸಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಬಳ್ಳಾರಿ, ಬೆಳಗಾವಿ, ತಿಪಟೂರು, ಬೆಂಗಳೂರು, ಕೊಪ್ಪಳ, ರಾಯಚೂರು, ಕಲ್ಬುರ್ಗಿಯಿಂದ ಬರುತ್ತಿರುವ ವರದಿಗಳ ಪ್ರಕಾರ ಈ ಸಾವುಗಳಿಗೆ ಸರ್ಕಾರ ಬಳಸುತ್ತಿರುವ ಕಳಪೆ ಗುಣಮಟ್ಟದ ಔಷಧಗಳು ಕಾರಣವಾಗಿವೆ. ಅಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವೂ ಬಾಣಂತಿಯರು, ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಗರ್ಭಿಣಿ ಸ್ತ್ರೀಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಾಣಂತಿಯರಿಗೆ ಪೋಷಣ್ ಅಭಿಯಾನ್, ಜನನಿ ಸುರಕ್ಷಾ ಯೋಜನೆ, ಆಹಾರದ ಕಿಟ್ ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ ಅಂಶವಿರುವ ಆಹಾರ ಪದಾರ್ಥಗಳನ್ನು ನೀಡುವುದು, ನಿಯಮಿತ ತಪಾಸಣೆ ನಡೆಸುವುದು ಹಾಗೂ ಮಾತೃವಂದನೆ ಯೋಜನೆಯ ಹಣ ತಲುಪಿಸುವುದರಲ್ಲಿ ರಾಜ್ಯ ಸರ್ಕಾರದ ಎರಡು ಇಲಾಖೆಗಳು ವಿಫಲವಾಗಿವೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದರು.

ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸರ್ಕಾರದ ಹೊಣೆಗೇಡಿತನದಿಂದ ಸಂಪೂರ್ಣ ಹದಗೆಟ್ಟಿದೆ. ಸಿಬ್ಬಂದಿ ಕೊರತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೊರಗುತ್ತಿವೆ. ಆ್ಯಂಬುಲೆನ್ಸ್ ಚಾಲಕರಿಗೆ ಸರ್ಕಾರ ವೇತನ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಐಸಿಯು, ಬ್ಲಡ್ ಬ್ಯಾಂಕ್ ಕೊರತೆ ಇದೆ. ಸರ್ಕಾರ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಿ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿಲ್ಪ, ಮನ್‌ಮುಲ್ ನಿರ್ದೇಶಕಿ ರೂಪಾ, ಮುಖಂಡರಾದ ಸೌಮ್ಯ, ಶೃತಿ, ಶೋಭಾ, ಮಂಜುಳಾ, ಜಾನಕಿ, ವಿದ್ಯಾ ನಾಗೇಂದ್ರ, ಸಿ.ಟಿ. ಮಂಜುನಾಥ್, ಭೀಮೇಶ್, ನಿತ್ಯಾನಂದ, ನವೀನ್‌ಕುಮಾರ್ ಸೇರಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.