ಶಿರಸಿಯಲ್ಲಿ ಡಿ.ಕೆ.ಶಿವಕುಮಾರ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Mar 27 2025, 01:00 AM IST

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದರು.

ಶಿರಸಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ, ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳದ ವತಿಯಿಂದ ನಗರದ ಐದು ವೃತ್ತದಲ್ಲಿ ಡಿ.ಕೆ. ಶಿವಕುಮಾರ ಪ್ರತಿಕೃತಿ ದಹಿಸಿ, ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತೊಲಗಿಸಿ, ತೊಲಗಿಸಿ, ಕಾಂಗ್ರೆಸ್ ತೊಲಗಿಸಿ ಎಂಬ ಧಿಕ್ಕಾರದ ಘೋಷಣೆ ಕೂಗಿ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ ಮಾತನಾಡಿ, ಮುಸ್ಲಿಮರ ಓಲೈಕೆಗಾಗಿ ಸಂವಿಧಾನ ಬದಲಾವಣೆ ಮಾಡಲು ಹೊರಟಿರುವುದು ರಾಜ್ಯಕ್ಕೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ. ಸಂವಿಧಾನಕ್ಕೆ ಅಪಮಾನ ಮಾಡಿದ ಡಿ.ಕೆ.ಶಿವಕುಮಾರ ಉಪ ಮುಖ್ಯಮಂತ್ರಿ ಸ್ಥಾನದಲ್ಲಿರಲು ಯೋಗ್ಯರಲ್ಲ. ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿರುವ ಡಿ.ಕೆ.ಶಿವಕುಮಾರ ಅವರನ್ನು ಸಚಿವ ಸಂಪುಟ ಸ್ಥಾನದಿಂದ ವಜಾಗೊಳಿಸಿ, ಪಕ್ಷದಿಂದಲೂ ಉಚ್ಛಾಟನೆಗೊಳಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ, ವಾರದಲ್ಲಿ ಮೂರು ದಿನ ಪ್ರತಿಭಟನೆ ಮಾಡುವ ಸನ್ನಿವೇಶವನ್ನು ಕಾಂಗ್ರೆಸ್ ನಿರ್ಮಾಣ ಮಾಡುತ್ತಿದೆ. ರೈತ ವಿರೋಧಿ, ದಲಿತರ ವಿರೋಧಿ ಸರ್ಕಾರವಾಗಿದ್ದು, ದಲಿತರ ಯೋಜನೆಗೆ, ಅವರ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರೆಂಟಿಗೆ ಉಪಯೋಗಿಸಿ ದಲಿತರಿಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ದಾರೆ. ವಾಲ್ಮೀಕಿ, ಮೂಡಾ ಹಗರಣ ಮಾಡಿದ ಸಿದ್ದರಾಮಯ್ಯ ರಾಜೀನಾಮೆ ನೀಡುವುದರ ಜತೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಡಿ.ಕೆ.ಶಿವಕುಮಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಹುಸಂಖ್ಯಾತ ಹಿಂದೂಗಳಿಗೆ ತೊಂದರೆಯಾದರೂ ಪರವಾಗಿಲ್ಲ. ಮುಸ್ಲಿಮರ ತುಷ್ಟೀಕರಣಕ್ಕೆ ಸಂವಿಧಾನ ಬದಲಾವಣೆ ಮಾಡಲು ಹೊರಟಿರುವುದು ದುರದೃಷ್ಟಕರ. ಹನಿಟ್ರ್ಯಾಪ್ ಸರ್ಕಾರವಾಗಿ ಬದಲಾಗಿದೆ. ಬಿಜೆಪಿಯ ೧೮ ಶಾಸಕರನ್ನು ಅಮಾನತ್ತು ಆದೇಶವನ್ನು ಸ್ಪೀಕರ್ ಕೂಡಲೇ ಹಿಂಪಡೆಯಬೇಕು ಎಂದರು.

ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹಿಸಿ, ಕಾಂಗ್ರೆಸ್ ಸರ್ಕಾರ ಹಾಗೂ ಡಿ.ಕೆ.ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ನಗರ ಮಂಡಳ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಮಾಧ್ಯಮ ಸಂಚಾಲಕ ರವಿಚಂದ್ರ ಶೆಟ್ಟಿ, ಪ್ರಮುಖರಾದ ಆರ್.ಡಿ.ಹೆಗಡೆ ಜಾನ್ಮನೆ, ಶ್ರೀರಾಮ ನಾಯ್ಕ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ವೀಣಾ ಶೆಟ್ಟಿ, ನಾಗರಾಜ ನಾಯ್ಕ, ಕುಮಾರ ಬೋರ್ಕರ ಮತ್ತಿತರರು ಇದ್ದರು.