ತೈಲ ದರ ಏರಿಕೆ ವಿರುದ್ಧ ಬೀದಿಗಿಳಿದ ಬಿಜೆಪಿ

| Published : Jun 18 2024, 01:31 AM IST / Updated: Jun 18 2024, 08:54 AM IST

ಸಾರಾಂಶ

 ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ ಬಿಜೆಪಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದೆ.  ವಿಜಯೇಂದ್ರ, ಅಶೋಕ್‌, ರವಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ದರ ಇಳಿಕೆ ಮಾಡುವವರೆಗೂ ಹೋರಾಟದ ಮಾಡುವುದಾಗಿ ಶಪಥಗೈದಿದ್ದಾರೆ.

  ಬೆಂಗಳೂರು : ಡೀಸೆಲ್‌, ಪೆಟ್ರೋಲ್ ದರ ಹೆಚ್ಚಳ ಮಾಡಿದ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಸೋಮವಾರ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯಿತು. ತೆಂಗಿನ ಚಿಪ್ಪು, ಖಾಲಿ ಚೊಂಬು ಪ್ರದರ್ಶಿಸಿ, ಎತ್ತಿನಗಾಡಿ ಮೇಲೆ ಬೈಕ್‌ ಇಟ್ಟು ಎಳೆದುಕೊಂಡು ಹೋಗುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

 ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಮತ್ತಿತರ ನಾಯಕರು ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಎತ್ತಿನಗಾಡಿಯಲ್ಲಿ ಆಗಮಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತೈಲ ಬೆಲೆ ಏರಿಕೆ ರಾಜ್ಯ ಸರ್ಕಾರದ ಜನವಿರೋಧಿ ತೀರ್ಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು, ದರ ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ ನೀಡಿದರು. ಅಲ್ಲದೆ, ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಇಲಾಖೆಯ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು.

ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ಬಿಜೆಪಿ, ಜನರ ಪರವಾಗಿ ಧ್ವನಿ ಎತ್ತಿದೆ. ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ರಾಜ್ಯಾದ್ಯಂತ ಹೋರಾಟ ಕೈಗೆತ್ತಿಕೊಂಡಿದೆ. ತೈಲ ದರ ಇಳಿಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಇದಕ್ಕೂ ಮೊದಲು, ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಎತ್ತಿನಗಾಡಿಯಲ್ಲಿ ತೆರಳಲು ಮುಂದಾದ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಟಿ.ರವಿ ಮತ್ತಿತರ ನಾಯಕರನ್ನು ಪೊಲೀಸರು ತಡೆದು, ವಾಪಸ್‌ ಕಳಿಸಿದರು. ಈ ವೇಳೆ, ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ, ಮಂಗಳೂರಿನಲ್ಲಿ ಪಿವಿಎಸ್‌ ವೃತ್ತದಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತದವರೆಗೆ ಕಾರನ್ನು ಹಗ್ಗದಿಂದ ಎಳೆದುಕೊಂಡು ಹೋಗಿ, ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ, ಸ್ಥಳೀಯ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಖರೀದಿಸಿ ಕಾರಿಗೆ ತುಂಬಿಸುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೋಲಾರದ ಡೂಂ ಲೈಟ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಎತ್ತಿನ ಬಂಡಿ, ಸೈಕಲ್ ಸವಾರಿ ಮಾಡುವ ಮೂಲಕ ಅಣುಕು ಪ್ರದರ್ಶನ ನಡೆಸಿದರು. ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಶಾಸಕ ಅಭಯ ಪಾಟೀಲ ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ನೇತೃತ್ವದಲ್ಲಿ ಪ್ರತಿಭಟನಾಕಾರರು ಎತ್ತುಗಳ ನೊಗಕ್ಕೆ ದ್ವಿಚಕ್ರ ವಾಹನ ಕಟ್ಟಿ ಎಳೆದು, ದರ ಏರಿಕೆಯನ್ನು ಅಣಕಿಸಿದರು.

ಶಿವಮೊಗ್ಗದಲ್ಲಿ ಕಿವಿಯಲ್ಲಿ ಹೂವು ಮುಡಿದು, ಕೈಯಲ್ಲಿ ಚಿಪ್ಪು ಹಿಡಿದು, ಕುದುರೆ, ಎತ್ತಿನ ಗಾಡಿ, ಟ್ರ್ಯಾಕ್ಟರ್ ಏರಿ ಸೀನಪ್ಪ ವೃತ್ತಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಸಿದ್ದು, ಡಿಕೆಶಿಯವರ ಅಣಕು ವೇಷ ಹಾಕಿಕೊಂಡು, ರಘುಪತಿ ರಾಘವ ರಾಜಾರಾಮ್ ಭಜನೆ ಹಾಡುತ್ತಾ ಪ್ರತಿಭಟನೆ ನಡೆಸಿದರು. ತುಮಕೂರಿನಲ್ಲಿ ಶಾಸಕ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಸೈಕಲ್ ಸವಾರಿ, ಜಟಕಾ ಗಾಡಿ ಏರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬೈಕೊಂದಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಿಂಬಿಸುವಂತಹ ಅಣಕು ಪ್ರದರ್ಶನ ನೀಡಿ ಪ್ರತಿಭಟನೆ ನಡೆಸಲಾಯಿತು. ವಾಹನ ಸವಾರರಿಗೆ ಹೂವು ಕೊಟ್ಟು, ಜನರ ಕಿವಿಗೆ ಹೂವಿಟ್ಟ ಸರ್ಕಾರದ ಕ್ರಮ ಅಣಕಿಸಲಾಯಿತು. ಚಿಕ್ಕಮಗಳೂರಲ್ಲಿ ಆಟೋಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಲಾಯಿತು. ರಾಮನಗರದ ಐಜೂರು ವೃತ್ತದಲ್ಲಿ ಕಿವಿಯಲ್ಲಿ ಹೂವು ಮುಡಿದು, ಕೈಯಲ್ಲಿ ಚಿಪ್ಪು ಹಿಡಿದು ಎತ್ತಿನಗಾಡಿ ಮೂಲಕ ಆಗಮಿಸಿ, ಪ್ರತಿಭಟನೆ ನಡೆಸಲಾಯಿತು. ಗದಗದ ಜನರಲ್ ಕಾರ್ಯಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಚಕ್ಕಡಿಯಲ್ಲಿ ಬೈಕ್ ಇಟ್ಟು ಎಳೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.