ಸಾರಾಂಶ
ಹಿಂದಿನ ಸರ್ಕಾರದಲ್ಲಿ ಸಣ್ಣ ಸಣ್ಣ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಈಗ ಅಂತಹ ಯೋಜನೆಗೆ ಈ ಸರ್ಕಾರ ಅನುದಾನ ಸ್ಥಗಿತ ಮಾಡಿದೆ ಎಂದು ಬಿಜೆಪಿ ಮುಖಂಡರು ಕೊಪ್ಪಳದಲ್ಲಿ ಆರೋಪಿಸಿದ್ದಾರೆ.
ಕೊಪ್ಪಳ: ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಕೂಡಲೇ ಅನುದಾನ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಆಡಳಿತಾವಧಿಯಲ್ಲಿ ನೀಡಿದ್ದ ₹570 ಕೋಟಿಯಲ್ಲಿ ₹170 ಕೋಟಿ ಬಿಡುಗಡೆ ಮಾಡಬೇಕಿದ್ದು, ಕಾಂಗ್ರೆಸ್ ಮಾಡಿಲ್ಲ. ಅದರಿಂದ ಹಿಂದುಳಿದ ಹಾಗೂ ಅತಿ ಹಿಂದುಳಿದ, ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಹಿಂದಿನ ಸರ್ಕಾರದಲ್ಲಿ ಸಣ್ಣ ಸಣ್ಣ ಯೋಜನೆಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಈಗ ಅಂತಹ ಯೋಜನೆಗೆ ಈ ಸರ್ಕಾರ ಅನುದಾನ ಸ್ಥಗಿತ ಮಾಡಿದೆ. ಕಾಂಗ್ರೆಸ್ ಸರ್ಕಾರ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅಹಿಂದ ಮಂತ್ರ ಎನ್ನುತ್ತಲೇ ಅಹಿಂದ ವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಲಾಯಿತು.ಅಹಿಂದ ನಾಯಕ ಎನ್ನುವ ಸಿದ್ದರಾಮಯ್ಯ ಅವರು ಅಹಿಂದ ವರ್ಗಕ್ಕೆ ಕಲ್ಲು ಹಾಕುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿಕಾರಿದರು.
ಕಳೆದ ೨೦೨೩ರ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಡಿ. ದೇವರಾಜ ಅರಸರು ಅಭಿವೃದ್ಧಿ ನಿಗಮಕ್ಕೆ ₹೫೦ ಕೋಟಿ ಘೋಷಿಸಿದೆ. ಆದರೆ ಬಳಕೆ ಕಡಿಮೆ ಮಾಡಿದೆ. ಹೀಗೆ ವಿಶ್ವಕರ್ಮ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಸವಿತಾ ಅಭಿವೃದ್ಧಿ ನಿಗಮ, ಅಲೆಮಾರಿ ಅಭಿವೃದ್ಧಿ ನಿಗಮ, ಮಡಿವಾಳ ನಿಗಮ, ಒಕ್ಕಲಿಗ ಅಭಿವೃದ್ಧಿ ನಿಗಮ ಹೀಗೆ ಹಲವು ಅಭಿವೃದ್ಧಿ ನಿಗಮಗಳಿಗೆ ಸಮರ್ಪಕ ಅನುದಾನ ಬಿಡುಗಡೆಯಾಗಿಲ್ಲ. ಕೂಡಲೇ ಒಬಿಸಿಯಡಿ ಬರುವ ನಿಗಮಗಳಿಗೆ ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು ಆಗ್ರಹಿಸಲಾಯಿತು.ಬಿಜೆಪಿಯ ಕೆ.ಎಸ್. ಹನುಮಂತ, ಫಕೀರಪ್ಪ ಆರೇರ್, ದುರುಗಪ್ಪ, ಉಮೇಶ ಕುರಡಕೇರ, ಗುರಪ್ಪ, ಶ್ರೀನಿವಾಸ, ರವಿ, ದೊಡ್ಡಯ್ಯ, ಗವಿಸಿದ್ದಪ್ಪ ಹಾಗೂ ಹಲವು ಮುಖಂಡರು ನೇತೃತ್ವ ವಹಿಸಿದ್ದರು.