ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಸರ್ಕಾರವು ನೀಡಿರುವ ರಸಗೊಬ್ಬರವನ್ನು ರೈತರಿಗೆ ಸರಿಯಾಗಿ ಹಂಚಿಕೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾದ ವತಿಯಿಂದ ಬುಧವಾರ ಸಂತೇಪೇಟೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಾರ್ಯಾಲಯದ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ಮತ್ತು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ರಾಜ್ಯದಲ್ಲಿ ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸಿರುವುದು ಮತ್ತು ರಸಗೊಬ್ಬರ ಕೊರತೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಖಂಡಿಸುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಾಡಿನ ರೈತರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಿಲ್ಲ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳಾದ ದಿನದಿಂದ ಈ ನಾಡಿನ ರೈತರಿಗೆ ಒಳಿತಾಗುವಂತಹ ಯಾವುದೇ ಕ್ರಮವನ್ನು, ನಿರ್ಧಾರಗಳನ್ನು, ಯೋಜನೆಗಳನ್ನು ತೆಗೆದುಕೊಂಡಿಲ್ಲ ಎಂದು ರೈತ ಮೋರ್ಚಾ ಆಕ್ಷೇಪಿಸುತ್ತದೆ. ಮುಂಗಾರು ವಾಡಿಕೆಗಿಂತ ಮುಂಚಿತವಾಗಿ ಆರಂಭವಾಗಿರುವ ಬಗ್ಗೆ ಅರಿವು ರಾಜ್ಯ ಸರ್ಕಾರಕ್ಕೆ ಮತ್ತು ಕೃಷಿ ಸಚಿವರಿಗೆ ಇರಬೇಕಿತ್ತು. ಇಡೀ ರಾಜ್ಯದಲ್ಲಿ ಒಂದೇ ಸಮಯಕ್ಕೆ ಬಿತ್ತನೆಯನ್ನು ಮಾಡುವುದಿಲ್ಲ. ಹಾಗಾಗಿ ಕಲಬುರ್ಗಿ, ಕೊಪ್ಪಳ, ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ಎಷ್ಟು ಯುರಿಯಾ ದಾಸ್ತಾನು ಇಡಬೇಕಾಗಿತ್ತು. ಬಿತ್ತನೆ ಬೀಜ ದಾಸ್ತಾನು ಇಡಬೇಕಾಗಿತ್ತು ಎನ್ನುವ ಅಂದಾಜು ಮಾಹಿತಿ ಕೃಷಿ ಸಚಿವರಿಗೆ ಇರಬೇಕಾಗಿತ್ತು ಎಂದು ಗಮನ ಸೆಳೆಯುತ್ತಿದ್ದೇವೆ ಎಂದರು.ರಸಗೊಬ್ಬರ ಕಾಳದಂಧೆ:
ರಾಜ್ಯದಲ್ಲಿ ರಸಗೊಬ್ಬರ ಕಾಳದಂಧೆ ನಡೆಯುತ್ತಿದೆ. ರೈತರು ಎರಡುಪಟ್ಟು, ಮೂರುಪಟ್ಟು ಹಣ ನೀಡಿ ಯುರಿಯಾ ಗೊಬ್ಬರವನ್ನು ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ನೀಡದೆ ಕಳಪೆ ಬಿತ್ತನೆ ಬೀಜ ನೀಡಿದ್ದು, ರೈತರು ಕಂಗಾಲಾಗಿ ಪರದಾಡುತ್ತಿದ್ದಾರೆ. ಇದರ ಪರಿಣಾಮವೇ ಇಂದು ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಕೃಷಿ ಸಚಿವರು ತಕ್ಷಣ ಜಾಗೃತರಾಗಿ ಕಳಪೆ ಬಿತ್ತನೆ ಬೀಜ ಮತ್ತು ಕಲಬೆರಕೆ ಗೊಬ್ಬರ ನೀಡುವ ಏಜೆನ್ಸಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅವರಿಗೆ ಸರಿಯಾದ ರೀತಿಯಲ್ಲಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸುತ್ತೇವೆ. ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಗೊಬ್ಬರ ಬಳಕೆಯ ಬಗ್ಗೆ ರೈತರಿಗೆ ಅರಿವು ಮೂಡಿಸುವ, ಮಾಹಿತಿಯನ್ನು ನೀಡುವ ಮತ್ತು ಉತ್ತೇಜನ ನೀಡುವಂತಹ ಕೆಲಸಗಳನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ಹಿಂದೆ ಬಿಜೆಪಿ ಸರ್ಕಾರದಲ್ಲಿ ರೈತ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾಪು ದಾಸ್ತಾನು ಅಂದರೆ ಬಫರ್ ಸ್ಟಾಕಿಗೆ ೧೦೦೦ ಕೋಟಿ ರು. ಗಳನ್ನು ನೀಡುತ್ತಿದ್ದರು. ಆದರೆ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಬಫರ್ ಸ್ಟಾಕಿಗೆ ಮೀಸಲಿರಿಸಿರುವ ಹಣವದ ಪ್ರಮಾಣವನ್ನು ಇಳಿಸಿ ಪ್ರಸ್ತುತ ೪೦೦ ಕೋಟಿ ರು. ಗಳನ್ನು ನೀಡುತ್ತಿದ್ದಾರೆ. ಅಂದರೆ ೬೦೦ ಕೋಟಿ ರು. ಗಳಷ್ಟು ಬಫರ್ ಸ್ಟಾಕಿಗೆ ಹಣವನ್ನು ಕಡಿಮೆ ಮಾಡಿರುತ್ತಾರೆ. ಸರ್ಕಾರವು ಕೂಡಲೇ ಹಿಂದಿನಂತೆ ಹಣ ನೀಡಬೇಕೆಂದು ಆಗ್ರಹಿಸಿದರು.ಸಹಾಯಧನ ಮುಂದುವರಿಸಿ:
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ೪೦೦೦ ರು. ಗಳನ್ನು ರೈತರಿಗೆ ನೀಡುತ್ತಿದ್ದರು. ಯಡಿಯೂರಪ್ಪ ಮತ್ತು ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಅದನ್ನು ಮುಂದುವರಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅದನ್ನು ರದ್ದು ಮಾಡಿದ್ದಾರೆ. ಈ ರೈತರ ಸಹಾಯಧನವನ್ನು ಮುಂದುವರೆಸಲು ಆಗ್ರಹಿಸಿದರು.ರೈತ ವಿದ್ಯಾನಿಧಿ ಯೋಜನೆ ಪುನಾರಂಭಿಸಿ:ಕೇಂದ್ರ ಸರ್ಕಾರದಿಂದ ೮ ಲಕ್ಷದ ೭೦ ಸಾವಿರಕ್ಕಿಂತ ಹೆಚ್ಚು ಮೆಟ್ರಿಕ್ ಟನ್ ಯೂರಿಯಾ ಬಂದಿದ್ದು, ಇಂದು ೫ ಲಕ್ಷ ೨೫ ಸಾವಿರ ಮೆಟ್ರಿಕ್ ಟನ್ ಯೂರಿಯಾ ಮಾತ್ರ ರಾಜ್ಯದ ಮಾರ್ಕೆಟ್‌ನಲ್ಲಿ ಇದೆ ಎಂದರೆ, ಉಳಿದ ೨ ಲಕ್ಷದ ೫೦ ಸಾವಿರ ಮೆಟ್ರಿಕ್ ಟನ್ ಗೊಬ್ಬರ ಏನಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತ ಮಕ್ಕಳಿಗೆ ಅನುಕೂಲವಾಗುವ ರೀತಿ ಕೊಡುತ್ತಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದ್ದಾರೆ. ಅದನ್ನು ಪುನರಾರಂಭ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಬೇಕಾದರೆ ೨೫೦೦೦ ರು. ಇತ್ತು. ಇಂದು ೩ ಲಕ್ಷ ರು. ಆಗಿದೆ. ಅದನ್ನು ಹಿಂದಿನ ಮೊತ್ತಕ್ಕೆ ತಂದು ನಿಲ್ಲಿಸಿ ರೈತರಿಗೆ ನೆರವಾಗುವಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಿ. ಎಚ್. ನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ ನಟರಾಜು, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಶಕುನೇಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಗಿರೀಶ್, ಪ್ರಸನ್ನಕುಮಾರ್, ಶೋಭನ್ ಬಾಬು, ವಿಜಯಲಕ್ಷ್ಮಿ ಅಂಜನಪ್ಪ, ರಾಜಕುಮಾರ್ ಇತರರು ಉಪಸ್ಥಿತರಿದ್ದರು.