ಸಚಿವ ತಂಗಡಗಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

| Published : Mar 27 2024, 01:00 AM IST

ಸಚಿವ ತಂಗಡಗಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ಖಂಡಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ । ಸಂಪುಟದಿಂದ ಕೈಬಿಡುವಂತೆ ಒತ್ತಾಯ

ಕನ್ನಡಪ್ರಭ ವಾರ್ತೆ ಕಾರಟಗಿ

ಮೋದಿ ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ಖಂಡಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು.

ಯುವ ಮೋರ್ಚಾ ಸೇರಿದಂತೆ ಮಂಡಲ ಮತ್ತು ಮಹಿಳಾ ಕಾರ್ಯಕರ್ತರು ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದರು.

ನೂರಾರು ಕಾರ್ಯಕರ್ತರು ಮೊದಲಿಗೆ ಇಲ್ಲಿನ ನವಲಿ ವೃತ್ತದಲ್ಲಿ ಸಾಂಕೇತಿಕವಾಗಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಂದ ನವಲಿ ರಸ್ತೆಯಲ್ಲಿನ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ದಿಢೀರ್ ನಿರ್ಧರಿಸಿ ಬೃಹತ್ ಮೆರವಣಿಗೆಯಲ್ಲಿ ತೆರಳಿದರು.

ಈ ವೇಳೆ ಪೊಲೀಸರು ಮಾಜಿ ಶಾಸಕರ ಕಚೇರಿ ಮತ್ತು ಚೆಳ್ಳೂರು ಕ್ರಾಸ್ ಬಳಿ ಪ್ರತಿಭಟನಾಕಾರರನ್ನು ತಡೆಯುವ ಪ್ರಯತ್ನ ಮಾಡಿದರೂ ಅದು ವಿಫಲವಾಯಿತು. ಬಳಿಕ ಸಚಿವರ ನಿವಾಸಕ್ಕೆ ತೆರಳುವ ಮುಖ್ಯ ರಸ್ತೆ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಇದೇ ಸಂದರ್ಭ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದಗಳು ನಡೆದವು. ಯಾವುದೇ ಕಾರಣಕ್ಕೂ ಸಚಿವರ ನಿವಾಸಕ್ಕೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಕಟ್ಟುನಿಟ್ಟಾಗಿ ಎಚ್ಚರಿಕೆ ಕೊಟ್ಟು, ಕಾನೂನು ಉಲ್ಲಂಘಿಸಬಾರದೆಂದು ಮನವಿ ಮಾಡಿಕೊಂಡ ಬಳಿಕ ಪ್ರತಿಭಟನೆ ಕೈಬಿಟ್ಟರು.

ರಾಜ್ಯದಲ್ಲಿ ಸಂಸ್ಕೃತಿ ಇಲ್ಲದಂಥ ವ್ಯಕ್ತಿಗೆ ಸಿಎಂ ಸಿದ್ದರಾಮಯ್ಯನವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನ ನೀಡಿದ್ದಾರೆ. ಕೂಡಲೇ ಸಚಿವ ಸಂಪುಟದಿಂದ ಇವರನ್ನು ಕೈ ಬಿಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.

ಸಚಿವ ಶಿವರಾಜ ತಂಗಡಗಿ ನಮ್ಮ ಕಪಾಳಕ್ಕೆ ಹೊಡೆಯುವವರೆಗೂ ನಾವು ಮೋದಿ ಮೋದಿ ಎನ್ನುತ್ತಲೇ ಇರುತ್ತೇವೆ. ತಾಕತ್ತಿದ್ದರೆ ಬಂದು ನಮ್ಮ ಕಪಾಳಕ್ಕೆ ಹೊಡೆಯಲಿ ನೋಡೋಣ ಎಂದು ಬಿಜೆಪಿ ಮುಖಂಡರು ಸವಾಲು ಹಾಕಿದರು.

ಸಚಿವ ತಂಗಡಗಿ ಕೂಡಲೇ ತಮ್ಮ ಹೇಳಿಕೆ ವಾಪಾಸ್ ಪಡೆಯಬೇಕು. ದೇಶದ ಯುವಕರ ಕ್ಷಮೆಯಚಿಸಬೇಕು. ಇಲ್ಲವಾದಲ್ಲಿ ಶಿವರಾಜ ತಂಗಡಗಿ ರಾಜ್ಯದ ಯಾವ ಭಾಗದಲ್ಲಿ ಕಾರ್ಯಕ್ರಮಕ್ಕೆ ತೆರಳಿದರೂ ಅಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗುತ್ತಾರೆ, ಅಲ್ಲಿ ಎಷ್ಟು ಜನರಿಗೆ ಕಪಾಳ ಮೋಕ್ಷ ಮಾಡುತ್ತಾರೆಂದು ನೋಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸ್ಗೂರು, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಜಡಿಯಪ್ಪ ಮುಕ್ಕುಂದಿ, ದುರ್ಗಾರಾವ್, ನಾಗರಾಜ್ ಬಿಲ್ಗಾರ್, ಅಮರೇಶ ರೈತನಗರ ಸೇರಿದಂತೆ ಇತರರು ಮಾತನಾಡಿದರು.

ಶಿವಕುಮಾರ ಅರಕೇರಿ, ಅರ್ಜುನ ರಾಯ್ಕರ್, ಮಂಜುನಾಥ ಕಟ್ಟಿಮನಿ, ಅಮರೇಶ ಕೋಮಲಾಪುರ, ಶಿವಶರಣೇಗೌಡ ಯರಡೋಣಿ, ಬಸವರಾಜ ಎತ್ತಿನಮನಿ, ರಾಜಶೇಖರ ಸಿರಗೇರಿ, ಬಸವರಾಜ ಕೊಪ್ಪದ, ರತ್ನಕುಮಾರಿ, ಪ್ರಿಯಾ ಪವಾರ, ಅಕ್ಕಮಹಾದೇವಿ, ದೀಪಾ ಹಿರೇಮಠ ಸೇರಿದಂತೆ ಇತರರಿದ್ದರು.