ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರದ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ವತಿಯಿಂದ ನಗರದ ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಕೆಂಪುಕಲ್ಲು ಪೂರೈಕೆ ಸ್ಥಗಿತವಾಗಿರಲಿಲ್ಲ. ಆದರೆ ಈಗ ಮನೆ, ಕಟ್ಟಡ ನಿರ್ಮಿಸಲು ಕೆಂಪುಕಲ್ಲು ಸಿಗದಂತೆ ರಾಜ್ಯ ಸರ್ಕಾರ ಮಾಡಿದೆ. ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಕಣ್ಣೀರು ಹಾಕುತ್ತಿದ್ದಾರೆ. ಮರಳು, ಕೆಂಪುಕಲ್ಲು ಸಮಸ್ಯೆ ಬಗೆಹರಿಸಲು ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಸಭೆ ನಡೆಸಿಲ್ಲ ಎಂದು ಆರೋಪಿಸಿದರು.ಅಕ್ರಮ ಮರಳುಗಾರಿಕೆ ನಡೆಯತ್ತಿದ್ದು, ಕಾಂಗ್ರೆಸ್ ನಾಯಕರ ಹಿಂಬದಿಯಲ್ಲಿ ನಿಲ್ಲುವವರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು, ಕೇರಳದಿಂದ ಕಡಿಮೆ ಬೆಲೆಗೆ ಜಿಲ್ಲೆಗೆ ಕೆಂಪುಕಲ್ಲು ಪೂರೈಕೆಯಾಗುತ್ತಿದೆ. ಅಕ್ರಮ ಮರಳುಗಾರಿಕೆ ಮೂಲಕ ಕಾಂಗ್ರೆಸಿಗರು ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ದೂರಿದರು.
ಎರಡು ವರ್ಷಗಳಿಂದ ಪರಿಹಾರ ಕಾಣದ ಮರಳು, ಕೆಂಪುಕಲ್ಲು ಸಮಸ್ಯೆಯನ್ನು ವಾರದೊಳಗೆ ಪರಿಹಾರ ಮಾಡುವುದಾಗಿ ಸಚಿವರು ಹೇಳಿದ್ದರೂ ಇದುವರೆಗೆ ಪರಿಹಾರ ದೊರೆತಿಲ್ಲ. ಹಣ ನೀಡಿ ಹುದ್ದೆ ಪಡೆದುಕೊಂಡ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನರು ಬೀದಿಗೆ ಬಂದು ಛೀಮಾರಿ ಹಾಕುವ ಮುನ್ನ ಸರ್ಕಾರ ಸಮಸ್ಯೆ ಬಗೆಹರಿಸಲಿ ಎಂದು ಕಾಮತ್ ಆಗ್ರಹಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದೆ ನಿರ್ಲಕ್ಷಿಸುತ್ತಿದೆ. ಕಾಂಗ್ರೆಸ್‌ನ ಬಣಗಳ ನಡುವಿನ ತಿಕ್ಕಾಟದಿಂದ ಜಿಲ್ಲೆಯ ಅಭಿವೃದ್ಧಿ ಸ್ಥಗಿತವಾಗಿದೆ. ಮರಳು, ಕೆಂಪುಕಲ್ಲು ಸಮಸ್ಯೆ ಬಗೆಹರಿಸಬೇಕಾದ ಗಣಿ ಸಚಿವರು ಜಿಲ್ಲೆಗೆ ಬರುತ್ತಿಲ್ಲ. ಕೆಂಪುಕಲ್ಲು ಪರವಾನಗಿಗೆ ಅರ್ಜಿ ಸಲ್ಲಿಸಿದರೆ 21 ದಿನಗಳ ಬದಲಿಗೆ 8-10 ತಿಂಗಳು ವಿಳಂಬ ಮಾಡುತ್ತಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ಪ್ರಬಲ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಮೇಯರ್‌ಗಳಾದ ದಿವಾಕರ ಪಾಂಡೇಶ್ವರ, ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ವಿಜಯಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.