ಸಾರಾಂಶ
-ಈ-ಸ್ವತ್ತು ನೀಡಲು ಜನರನ್ನು ಅಲೆದಾಡಿಸುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ
-----ಕನ್ನಡಪ್ರಭ ವಾರ್ತೆ ಸಾಗರ
ನಗರಸಭೆ ಆಡಳಿತ ವೈಫಲ್ಯ ಖಂಡಿಸಿ, ಈ-ಸ್ವತ್ತು ನೀಡಲು ಜನರನ್ನು ಅಲೆದಾಡಿಸುತ್ತಿರುವ ಅಧಿಕಾರಿಗಳ ಕ್ರಮದ ವಿರುದ್ಧ ಬಿಜೆಪಿಯಿಂದ ನಗರಸಭೆ ಎದುರು ಪ್ರತಿಭಟನೆ ನಡೆಸಲಾಯಿತು.ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ರಾಜ್ಯ ಸರ್ಕಾರ ಜನರನ್ನು ನಗರಸಭೆಗೆ ಅಲೆಸಲು ಈ-ಸ್ವತ್ತು ಎಂಬ ಹೊಸ ಅಸ್ತ್ರವನ್ನು ಅಧಿಕಾರಿಗಳ ಕೈಗೆ ನೀಡಿದೆ. ಸಾಗರ ನಗರವ್ಯಾಪ್ತಿಯಲ್ಲಿ ೭ಸಾವಿರಕ್ಕೂ ಹೆಚ್ಚು ಖಾತೆಗೆ ಈ-ಸ್ವತ್ತು ಮಾಡಿಸಲು ಅಧಿಕಾರಿಗಳು ಜನರ ರಕ್ತ ಹೀರುತ್ತಿದ್ದಾರೆ. ಯಾವುದೇ ಕೆಲಸಕ್ಕಾದರೂ ಜನರನ್ನು ಅಲೆದಾಡಿಸುವುದು ನಗರಸಭೆ ಅಧಿಕಾರಿಗಳಿಗೆ ಮಾಮೂಲಿಯಾಗಿದೆ. ಪ.ಜಾ ಮತ್ತು ಪ.ವರ್ಗಕ್ಕೆ ಮೀಸಲಾಗಿರುವ ಹಣದ ಸದ್ಭಳಕೆಯಾಗುತ್ತಿಲ್ಲ. ಒಟ್ಟಾರೆ ಕಾಂಗ್ರೆಸ್ ಆಡಳಿತದಲ್ಲಿ ನಗರಸಭೆ ಆಡಳಿತ ಹಳಿ ತಪ್ಪಿ ಹೋಗಿದೆ ಎಂದು ದೂರಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತ ನೀರಾಗಿದೆ. ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಅವಧಿಯಲ್ಲಿ ತಂದ ಅನುದಾನದ ಕಾಮಗಾರಿಗಳು ಸಹ ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ಬರುತ್ತಿಲ್ಲ. ಸಚಿವರು, ಶಾಸಕರು ನೂರು ಮೀಟರ್ ರಸ್ತೆ, ಚರಂಡಿ ಕಾಮಗಾರಿ ಉದ್ಘಾಟನೆಗೆ ಐದು ಕಿ.ಮೀ. ಭಾಷಣ ಹೊಡೆಯುತ್ತಿದ್ದಾರೆ. ಸ್ವಚ್ಚತೆ, ಬೀದಿದೀಪ, ಅಭಿವೃದ್ಧಿ ಕೆಲಸ ಯಾವುದೂ ನಡೆಯುತ್ತಿಲ್ಲ. ಸೊರಬ ರಸ್ತೆ ಅಗಲೀಕರಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಹಾಲಪ್ಪನವರು ೧೦೦ ಕೋಟಿ ರು. ಅನುದಾನ ತಂದಿದ್ದರು. ಆ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ನಗರಸಭೆ ಅನಾಥವಾಗಿದೆ. ದಿನನಿತ್ಯ ಜನಸಾಮಾನ್ಯರು ತಮ್ಮ ಕೆಲಸಕ್ಕಾಗಿ ನಗರಸಭೆಗೆ ಅಲೆದಾಡುತ್ತಿದ್ದು, ಈ-ಆಸ್ತಿ ಹೆಸರಿನಲ್ಲಿ ಜನರ ಶೋಷಣೆ ನಡೆಯುತ್ತಿದೆ. ನಗರಸಭೆಯಲ್ಲಿ ಬ್ರೋಕರ್‌ಗಳ ಹಾವಳಿ ಜಾಸ್ತಿಯಾಗಿದ್ದು, ನಗರಸಭೆ ಸದಸ್ಯರಿಗೆ ಗೌರವ ಸಿಗುತ್ತಿಲ್ಲ. ಅಧಿಕಾರಿಗಳು ಕಾಂಗ್ರೆಸ್ ಪುಡಾರಿಗಳು ಹೇಳಿದ ಮಾತು ಕೇಳುತ್ತಿದ್ದಾರೆ. ಬೀದಿದೀಪ, ವಿದ್ಯುತ್, ಸ್ವಚ್ಚತೆಗೆ ಆದ್ಯತೆ ನೀಡುತ್ತಿಲ್ಲ. ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಲ್ಲಿ ಎಲ್ಲ ಕೆಲಸವಾಗುತ್ತಿದ್ದು, ಬಿಜೆಪಿ ಸದಸ್ಯರ ವಾರ್ಡ್‌ಗಳ ಬಗ್ಗೆ ತಾರತಮ್ಯನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಸಾಗರದಲ್ಲಿ ಯಾವುದೇ ಹೊಸ ಕಾಮಗಾರಿಯನ್ನು ರಾಜ್ಯ ಸರ್ಕಾರದಿಂದ ಶಾಸಕರು ತಂದಿಲ್ಲ. ಕೇಂದ್ರ ಸರ್ಕಾರದ್ದು, ನಗರಸಭೆ ಸಾಮಾನ್ಯನಿಧಿಯಿಂದ ಮಂಜೂರಾದ ಕಾಮಗಾರಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಇಂದಿರಾ ಕ್ಯಾಂಟಿನ್ಗೆ ೫ ಲಕ್ಷ ರು. ಬಂದಿದ್ದು ಬಿಟ್ಟರೆ ಬೇರೆ ಯಾವುದೇ ಅನುದಾನ ಬಂದಿಲ್ಲ ಎನ್ನುವುದನ್ನು ನಾನು ದಾಖಲೆ ಸಹಿತ ಸಾಬೀತು ಮಾಡುತ್ತೇನೆ. ನಗರಸಭೆಯಲ್ಲಿ ಅಧಿಕಾರಿಗಳು ಯಾರದ್ದೋ ಮರ್ಜಿಗೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ನಗರಸಭೆ ಸದಸ್ಯ ಆರ್.ಶ್ರೀನಿವಾಸ್ ಮೇಸ್ತ್ರೀ, ವಿ.ಮಹೇಶ್, ಪ್ರೇಮ ಸಿಂಗ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸವಿತಾ ವಾಸು, ಮೈತ್ರಿ ಪಾಟೀಲ್, ಭಾವನಾ ಸಂತೋಷ್, ಶಂಕರ್ ಅಳ್ವಿಕೋಡಿ, ತುಕಾರಾಮ್, ಕುಸುಮ ಸುಬ್ಬಣ್ಣ, ಸತೀಶ್ ಕೆ., ಪರಶುರಾಮ್, ಪ್ರಶಾಂತ್ ಕೆ.ಎಸ್., ಸುಧಾ ಉದಯ್, ಮಹೇಶ್ ಎಂ.ಆರ್., ಕೃಷ್ಣ ಶೇಟ್, ಸಂತೋಷ್ ಶೇಟ್, ಶ್ರೀರಾಮ್, ಗೋಪಾಲ್ ಹಾಜರಿದ್ದರು.
-------ಫೋಟೊ: ಸಾಗರ ನಗರಸಭೆ ಎದುರು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
೧೧ಕೆ.ಎಸ್.ಎ.ಜಿ.೧