ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಎತ್ತಿನ ಗಾಡಿ, ಬೈಕ್ ಹೊತ್ತಿಕೊಂಡು, ಕಾರು ಎಳೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.ನಗರದ ಬೀಳೂರು ಗುರುಬಸವ ಅಜ್ಜನವರ ದೇವಸ್ಥಾನದಿಂದ ಕಾರ್ಯಕರ್ತರು, ಮುಖಂಡರು ಬಸವೇಶ್ವರ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ಮೂಲಕ ಆಗಮಿಸಿ ರಾಜ್ಯ ಸರ್ಕಾರ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ನೂರಾರು ಆಸೆ, ಆಮಿಶಗಳನ್ನು ತೋರಿಸಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೇ ವರ್ಷದಲ್ಲಿ ಜನರ ವಿರೋಧಕ್ಕೆ ಕಾರಣವಾಗಿದೆ. ಶನಿ, ದರಿದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಗಂಟುಬಿದ್ದಿದೆ. ಕಾಂಗ್ರೆಸ್ ನವರು ಚುನಾವಣೆಯಲ್ಲಿ ಜನರಿಗೆ ಸುಳ್ಳು ಹೇಳಿ ಮೋಸದಿಂದ ಸರ್ಕಾರ ನಡೆಸುತ್ತಿದ್ದಾರೆ. ತೈಲ ಬೆಲೆ ಹೆಚ್ಚಳ ಮಾಡಿ ಬರೆ ಎಳೆದಿದ್ದಾರೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನಸಾಮಾನ್ಯರ ಬದುಕು ದುಸ್ಥಿಗೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಸರ್ಕಾರ ಅಭಿವೃದ್ಧಿ ಕಡೆಗಣಿಸಿದೆ. ಗ್ಯಾರಂಟಿಗಳು ಜನರ ಜೇಬು ತುಂಬಿಸುವ ಬದಲು ಬೇರೆ ರೂಪದಲ್ಲಿ ಕೀಸೆಗೆ ಕತ್ತರಿ ಹಾಕಲಾಗುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ಖಯಾಲಿ ಕಾಂಗ್ರೆಸ್ ಗೆ ರೂಢಿಯಾಗಿದೆ. ಇವರ ನಾಟಕ ಜನರಿಗೆ ಗೊತ್ತಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದರು.ಶಾಸಕ ಮೇಟಿ ಬೂತ್ ನಲ್ಲಿ ಬಿಜೆಪಿಗೆ ಲೀಡ್: ಗ್ಯಾರಂಟಿ ಅಲೆಯಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿತ್ತು. ಆದರೆ ಸಿಕ್ಕಿದ್ದು ಕೇವಲ 9 ಸ್ಥಾನ. ರಾಜ್ಯದ ಈಗಿರುವ ಕಾಂಗ್ರೆಸ್ ಶಾಸಕರ 40 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಶಾಸಕ ಮೇಟಿ ಅವರ ಕ್ಷೇತ್ರ ಹಾಗೂ ಬೂತ್ ನಲ್ಲಿ ಬಿಜೆಪಿ ಮುನ್ನಡೆ ಸಿಕ್ಕಿದೆ. ಇದು ಕಾಂಗ್ರೆಸ್ ಜನವಿರೋಧಿ ನೀತಿಗೆ ರಾಜ್ಯದ ಜನತೆ ಕೊಟ್ಟ ಉತ್ತರವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ಮುಖಂಡರಾದ ರಾಜು ನಾಯ್ಕರ, ಬಸವರಾಜ ಯಂಕಂಚಿ, ಸವಿತಾ ಹೊಸೂರ, ವೀರಣ್ಣ ಹಳೇಗೌಡರ, ಮಲ್ಲಯ್ಯ ಮೂಗನೂರಮಠ, ಸತ್ಯನಾರಾಯಣ ಹೇಮಾದ್ರಿ, ಅಶೋಕ ಲಿಂಬಾವಳಿ, ನಾಗಪ್ಪ ಅಂಬಿ, ಶಿವಾನಂದ ಸುರಪುರ, ರಾಜು ಗಾಣಗೇರ ಸೇರಿದಂತೆ ಅನೇಕ ಕಾರ್ಯ ಕರ್ತರು ಭಾಗವಹಿಸಿದ್ದರು.