ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರು ಹಾಗೂ ಹಿಂದೂಗಳನ್ನು ಬೇರ್ಪಡಿಸುವ ರೀತಿಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ
ಗಂಗಾವತಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಖಂಡಿಸಿ ಬಿಜೆಪಿ ನಗರದ ಕೃಷ್ಣದೇವರಾಯ ಸರ್ಕಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಶಾಸಕ ಗಾಲಿ ಜನಾರ್ಧನ ರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರು ಹಾಗೂ ಹಿಂದೂಗಳನ್ನು ಬೇರ್ಪಡಿಸುವ ರೀತಿಯಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಅದರ ಪರಿಣಾಮವಾಗಿಯೇ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ. ಮಂಗಳೂರಿನ ರಸ್ತೆಯಲ್ಲಿ ಸುಹಾಸ್ ಶೆಟ್ಟಿಯನ್ನು ಭೀಕರವಾಗಿ ಕೊಲೆ ಮಾಡುವ ಮಟ್ಟಕ್ಕೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಕಾನೂನಿನ ಭಯವಿಲ್ಲದೆ ಕಾನೂನು ಕೈಗೆತ್ತಿಗೊಳ್ಳುತ್ತಿರುವ ಕೆಲಸ ರಾಜ್ಯದಲ್ಲಿ ನಡೆಯುತ್ತಿವೆ. ಮುಂದೊಂದು ದಿನ ರಾಜ್ಯದಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಯಾಗಲಿದೆ. ಇದಕ್ಕೆಲ್ಲ ಸಿದ್ದರಾಮಯ್ಯ ಅವರ ಸರ್ಕಾರವೇ ಕಾರಣವಾಗಿದೆ ಎಂದರು.ರಾಜ್ಯದಲ್ಲಿ ಬಿಜೆಪಿ ವತಿಯಿಂದ ಸುಹಾಸ್ ಕೊಲೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರ ಎಚ್ಚೇತ್ತುಕೊಂಡು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು, ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ಗೀರೇಗೌಡ, ಮನೋಹರಗೌಡ, ಕಾಶಿನಾಥ ಚಿತ್ರಗಾರ, ಜಿಲಾನಿ ಪಾಷಾ, ದುರಗಪ್ಪ ದಳಪತಿ ಇತರರಿದ್ದರು.