ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದಾರೆ. ಅವರದ್ದೇ ಇಲಾಖೆಯಾಗಿರುವ ಹಣಕಾಸು ಇಲಾಖೆಯೇ ಅವರಿಗೆ ಎಚ್ಚರಿಕೆ ನೀಡಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಖಜಾನೆಯಲ್ಲಿ ಹಣವಿಲ್ಲದಂತಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಚೊಂಬು, ಕಾಯಿಕಂಠ ಮತ್ತು ಖಾಲಿ ಪೆಟ್ಟಿಗೆಯೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ದಿವಾಳಿತನದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುತ್ತಿದ್ದಾರೆ. ಅವರದ್ದೇ ಇಲಾಖೆಯಾಗಿರುವ ಹಣಕಾಸು ಇಲಾಖೆಯೇ ಅವರಿಗೆ ಎಚ್ಚರಿಕೆ ನೀಡಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ದೂರಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ ಅವರು, ಸೆ.೧೭ರಂದು ಆರ್ಥಿಕ ಇಲಾಖೆ ನಮ್ಮಲ್ಲಿ ಹಣಕಾಸಿನ ಕೊರತೆ ಇದೆ. ಯಾವುದೇ ಹೊಸ ಘೋಷಣೆ ಮಾಡಬೇಡಿ ಎಂದು ಸ್ಪಷ್ಟವಾಗಿ ಪತ್ರ ಬರೆದಿದ್ದಾರೆ. ಆದರೂ ಕರಾವಳಿ ಭಾಗಕ್ಕೆ ೧೨ ಸಾವಿರ ಕೋಟಿ ರು. ವಿಶೇಷ ಅನುದಾನ ಘೋಷಣೆ ಮಾಡಿದ್ದೀರಿ. ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದರು.

ಬಜೆಟ್ ಘೋಷಣೆಗಳನ್ನು ಪೂರೈಸಲು ರಾಜ್ಯ ತನ್ನ ಸಾಲದ ಮೇಲಿನ ಸಾಮರ್ಥ್ಯವನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಂಡಿದೆ. ಆದರೆ, ಹೊಸ ಯೋಜನೆಗಳಿಗೆ ಹಣಕಾಸು ಒದಗಿಸಲು ರಾಜ್ಯಕ್ಕೆ ಹೆಚ್ಚು ಸಾಲ ಮಾಡುವ ಅವಕಾಶವೇ ಇಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ. ಆದರೂ ಮುಖ್ಯಮಂತ್ರಿಗಳು ಇನ್ನಿಲ್ಲದ ಘೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರಕ್ಕೆ ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ ಅಷ್ಟೆ. ಅವರಿಗೆ ರಾಜ್ಯದ ಜನರ, ರೈತರ ಹಿತ ಬೇಕಾಗಿಲ್ಲ ಎಂದು ದೂರಿದರು.

ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡಿಲ್ಲ. ಗೃಹಲಕ್ಷ್ಮೀ ಹಣ ನೀಡಲಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಗೆ ಬಾಕಿ ನೀಡಬೇಕಿದೆ. ಪಾಠ ಮಾಡುವ ಶಿಕ್ಷಕರಿಗೆ ವೇತನ ನೀಡಿಲ್ಲ. ಹೀಗೆ ಹಲವು ಇಲಾಖೆಗಳಲ್ಲಿ ಸಾವಿರಾರು ಕೋಟಿ ಬಾಕಿ ಇದೆ ಎಂದು ಆರೋಪಿಸಿದರು.

ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎಂ. ಶಿವಲಿಂಗೇಗೌಡರು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿಕೊಟ್ಟ ಬಳಿಕ ಗೌರವಯುತವಾಗಿ ನೀಡುವ ಕುರಿತು ನೀಡಿದ ಹೇಳಿಕೆ ಪರೋಕ್ಷವಾಗಿ ಲಂಚದ ಬೇಡಿಕೆಯಾಗಿದೆ. ಸಂಪುಟ ದರ್ಜೆ ಸಚಿವರೇ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವಂತೆ ಜನರಿಗೆ ಸಲಹೆ ನೀಡುತ್ತಿದ್ದಾರೆ ಎಂದ ಮೇಲೆ ಇನ್ನು ಸರ್ಕಾರದ ಪರಿಸ್ಥಿತಿ ಯಾವ ರೀತಿಯಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿವೇಕ್, ರಾ.ಶಿ.ಸಿದ್ದರಾಜುಗೌಡ, ಒಬಿಸಿ ಮೋರ್ಚಾ ಅಧ್ಯಕ್ಷ ನರಸಿಹಾಚಾರ್, ನಗರಾಧ್ಯಕ್ಷ ಪ್ರಸನ್ನ, ಮುಖಂಡರಾದ ಸಿ.ಟಿ. ಮಂಜುನಾಥ್, ಚಂದ್ರು, ಹೊಸಹಳ್ಳಿ ಶಿವು, ನಾಗಾನಂದ್, ಶಿವಕುಮಾರ್ ಆರಾಧ್ಯ, ಭೀಮೇಶ್, ಆನಂದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.