ಸಾರಾಂಶ
೩೪ ನೆಕ್ಕಿಲಾಡಿ - ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ೩೪ ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ಆರೋಪಿಸಿ ಸೋಮವಾರ ೩೪ ನೆಕ್ಕಿಲಾಡಿಯ ಆದರ್ಶನಗರದ ಬಳಿ ಬಿಜೆಪಿಯ ೩೪ ನೇ ನೆಕ್ಕಿಲಾಡಿ ಶಕ್ತಿ ಕೇಂದ್ರದ ವತಿಯಿಂದ ರಸ್ತೆ ತಡೆ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನತೆಗೆ ವಂಚಿಸುತ್ತಿದ್ದು, ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ದು ಎಲ್ಲಾ ಯೋಜನೆಗಳು ಅಪೂರ್ಣವಾಗಿದೆ. ಪುತ್ತೂರು – ಉಪ್ಪಿನಂಗಡಿ ನಡುವಣದ ಅಪೂರ್ಣ ರಸ್ತೆ ಕಾಮಗಾರಿಯಿಂದಾಗಿ ಜನರು ದಿನ ನಿತ್ಯ ಅವಘಡಗಳಿಗೆ ತುತ್ತಾಗುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.೩೪ ನೆಕ್ಕಿಲಾಡಿ - ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ೩೪ ನೆಕ್ಕಿಲಾಡಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ಆರೋಪಿಸಿ ಸೋಮವಾರ ೩೪ ನೆಕ್ಕಿಲಾಡಿಯ ಆದರ್ಶನಗರದ ಬಳಿ ಬಿಜೆಪಿಯ ೩೪ ನೇ ನೆಕ್ಕಿಲಾಡಿ ಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಲ್ಪಟ್ಟ ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಈ ರಸ್ತೆಯ ಕೆಲಸ ಕಳೆದ ಡಿಸೆಂಬರ್‌ನಲ್ಲಿ ಮುಗಿಯಬೇಕಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ರಸ್ತೆಯ ಕೆಲಸ ಕುಂಟುತ್ತಾ ಸಾಗಲು ಸರಕಾರ ಆರ್ಥಿಕವಾಗಿ ದಿವಾಳಿಯಂಚಿಗೆ ತಲುಪಿದ್ದೇ ಕಾರಣ. ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ದಿನ ನಿತ್ಯ ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಜನರು ಅವಘಡಕ್ಕೊಳಗಾಗಿ ಆಸ್ಪತ್ರೆಗೆ ಸೇರುವಂತಾಗಿದೆ. ತಕ್ಷಣವೇ ಈ ಕಾಮಗಾರಿ ಕೆಲಸವನ್ನು ನಿರ್ವಹಿಸಬೇಕು. ಇದೇ ರೀತಿಯ ಚಾಳಿ ಮುಂದುವರಿದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸ್ಥಳಕ್ಕೆ ಪಿಡಬ್ಲ್ಯೂಡಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಾನಿಷ್ಕ ಬಂದು ೧೨ ದಿನದೊಳಗೆ ಒಂದು ಪದರ ಡಾಂಬರು ಹಾಕಿ ಕೊಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ಬಿಜೆಪಿ ಮುಖಂಡರಾದ ಸುನೀಲ್ ಕುಮಾರ್ ದಡ್ಡು ಮತ್ತಿತರರಿದ್ದರು.