ಸಾರಾಂಶ
ಕೊಪ್ಪಳ: ಹದಗೆಟ್ಟ ರಸ್ತೆಯ ಮಧ್ಯೆ ಗುಂಡಿ ಬಿದ್ದಿರುವ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಭಾರತೀಯ ಜನತಾ ಪಾರ್ಟಿ ಮುಖಂಡರು ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿ ಬುಧುವಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಹದಗೆಟ್ಟ ರಸ್ತೆಗಳನ್ನು ದುರಸ್ಥಿ ಮಾಡಿಸಲು ಆಗದ ಗುಂಡಿಗಳ ಸರ್ಕಾರ ಎನ್ನುವ ಬ್ಯಾನರ್ ಹಿಡಿದು ಕಿನ್ನಾಳ ರಸ್ತೆಯಲ್ಲಿ ತುಂಬಿರುವ ಗುಂಡಿಗಳ ಬಳಿಯೇ ಪ್ರತಿಭಟನೆ ನಡೆಸಿದರು.ಕಾಂಗ್ರೆಸ್ ನಾಯಕರ ಭಾವಚಿತ್ರಗಳನ್ನು ಸಹ ಗುಂಡಿಗಳಲ್ಲಿ ತೇಲಿ ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ದೀವಾಳಿಯಾಗಿದೆ, ಗುಂಡಿ ಮುಚ್ಚಿ, ದುರಸ್ಥಿ ಮಾಡಲಾಗದಷ್ಟು ಹದಗೆಟ್ಟು ಹೋಗಿದೆ. ಜನರು ಗುಂಡಿಯಲ್ಲಿ ಬಿದ್ದು ಯಾತನೆ ಅನುಭವಿಸುತ್ತಿದ್ದಾರೆ.ಕಿನ್ನಾಳ ರಸ್ತೆಯಲ್ಲಿಯೇ ಶಿಕ್ಷಕಿಯೋರ್ವಳು ಅಪಘತದಿಂದ ಸಾವನ್ನಪ್ಪಿದ್ದಾರೆ. ರಸ್ತೆಗಳು ಅಷ್ಟೊಂದು ಹದಗೆಟ್ಟು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಮಧ್ಯೆ ಹಾದು ಹೋಗಿರುವ ಹೆದ್ದಾರಿಯನ್ನು ಹೊರತುಪಡಿಸಿದೇ ಉಳಿದ್ಯಾವ ರಸ್ತೆಯಲ್ಲಿಯೂ ಸಂಚಾರ ಮಾಡದಂತೆ ಆಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು, ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ದಢೇಸ್ಗೂರು ಮಾತನಾಡಿ, ಇದೆಂಥ ಸರ್ಕಾರವಿದೆ ರಾಜ್ಯದಲ್ಲಿ ರಸ್ತೆಗಳನ್ನಂತೂ ಮಾಡುತ್ತಿಲ್ಲ. ಕನಿಷ್ಠ ರಸ್ತೆಯಲ್ಲಿರುವ ಗುಂಡಿಗಳನ್ನಾದರೂ ಮುಚ್ಚಿ ಸಂಚಾರಕ್ಕೆ ದಾರಿ ಮಾಡಿಕೊಡುತ್ತಿಲ್ಲ. ಇಂತಹ ರಸ್ತೆಗಳಲ್ಲಿ ಸಂಚಾರ ಮಾಡುವುದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ ಅವರು, ಕೊಪ್ಪಳ ನಗರ ಹಾಗೂ ಜಿಲ್ಲಾದ್ಯಂತ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ ಎಂದು ಕಿಡಿಕಾರಿದರು.
ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಗಣೇಶ ಹೊರತಟ್ನಾಳ, ಕಂಠಯ್ಯ ಹಿರೇಮಠ, ಉಮೇಶ ಕುರುಡೇಕರ್, ಫಕೀರಪ್ಪ ಆರೇರ, ಪ್ರಾಣೇಶ ಮಾದಿನೂರು, ಕೀರ್ತಿ ಪಾಟೀಲ್ ಮೊದಲಾದವರು ಇದ್ದರು.