ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ದ.ಕ. ಜಿಲ್ಲೆಯ ಬಜ್ಪೆಯ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಭೀಕರ ಹತ್ಯೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭ ಪ್ರತಿಭಟನಾಕಾರನನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿನನಿತ್ಯ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು.ಸುಹಾಸ್ ಶೆಟ್ಟಿಯ ಹತ್ಯೆಯಿಂದ ಲಕ್ಷಾಂತರ ಕಾರ್ಯಕರ್ತರಿಗೆ ಬಹಳ ನೋವಾಗಿದೆ. ತಮ್ಮ ಧ್ಯೇಯಕ್ಕಾಗಿ ಹೋರಾಟ ನಡೆಸುವ ಹಿಂದೂ ಕಾರ್ಯಕರ್ತರು ತಂತಿ ಮೇಲೆ ನಡಿಗೆ ಮಾಡುವಂತಾಗಿದೆ. ಕಾಂಗ್ರೆಸ್ ಸರ್ಕಾರದ ಓಟ್ ಬ್ಯಾಂಕ್, ಮುಸ್ಲಿಂ ಓಲೈಕೆಯ ರಾಜಕಾರಣದಿಂದಾಗಿ ಈ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.ಈ ಕೊಲೆಯ ಹಿಂದೆ ಹಣಕಾಸಿನ ವ್ಯವಹಾರ ಇಲ್ಲ, ಸುಹಾಸ್ ಹಿಂದೂ ಕಾರ್ಯಕರ್ತನಾಗಿದ್ದ ಎಂಬ ಒಂದೇ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಆರೋಪಿಗಳು ಜನನಿಬಿಡ ಪ್ರದೇಶದಲ್ಲಿ ಯಾರ ಭಯವು ಇಲ್ಲದೇ ಕೊಲೆ ಮಾಡಿ, ಪೊಲೀಸ್ ಇಲಾಖೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ಕರ್ತವ್ಯಕ್ಕೂ ಸವಾಲು ಹಾಕಿದ್ದಾರೆ. ಪೊಲೀಸರು ನೈಜ ಆರೋಪಿಗಳನ್ನು ಶೀಘ್ರ ಬಂಧಿಸಿ ಹಿಂದೂ ಕಾರ್ಯಕರ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಕಾಪು ಶಾಸಕ ಸುರೇಶ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಜಿ.ಪ್ರ. ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷ ಸಂಧ್ಯಾ ರಮೇಶ್, ರಾಜ್ಯ ಮಹಿಳಾ ಮೋರ್ಚಾ ಪ್ರ.ಕಾರ್ಯದರ್ಶಿ ಶಿಲ್ಪಾ ಸುವರ್ಣ, ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್, ಪ್ರಮುಖರಾದ ಶಶಾಂಕ್ ಶಿವತ್ತಾಯ, ದಿನೇಶ ಅಮೀನ್, ವಿಜಯ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.