ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ತೀವ್ರ ಬರಗಾಲ ಪ್ರದೇಶವೆಂದು ಘೋಷಿಸಬೇಕು. ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನೂರಾರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಬಳಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ತೀವ್ರ ಬರಗಾಲ ಪ್ರದೇಶವೆಂದು ಘೋಷಿಸಬೇಕು. ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ಕೊಡಬೇಕು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನೂರಾರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಬಳಿ ಬೃಹತ್ ಧರಣಿ ಸತ್ಯಾಗ್ರಹ ನಡೆಸಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ರಾಜ್ಯ ಸರ್ಕಾರ, ಜಿಲ್ಲಾಡಳಿತಗಳು ಕಣ್ಮುಚ್ಚಿದ್ದು, ಬರವಿದ್ದ ತಾಲೂಕುಗಳಲ್ಲಿ ಬರಗಾಲ ಎಂದು ಘೋಷಿಸದೆ ರೈತರಿಗೆ ಅನ್ಯಾಯ ಮಾಡುತ್ತಿವೆ. ಕೇವಲ ಬರಗಾಲ ಎಂದು ಘೋಷಿಸದೆ ತಕ್ಷಣ ಪರಿಹಾರವನ್ನೂ ಕೊಡುವ ಕೆಲಸ ಆಗಬೇಕಿದೆ. ಜಿಲ್ಲೆಯನ್ನು ಅತೀ ತೀವ್ರ ಬರಗಾಲವೆಂದು ಘೋಷಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಇಂತಹ ತೀವ್ರ ಬರಗಾಲದಲ್ಲಿ ರೈತರಿಗೆ ಸ್ಪಂದಿಸದ ನಿಮಗೆ ಮುಂದಿನ ಚುನಾವಣೆಯಲ್ಲಿ ಜನರೆ ಮನೆಗೆ ಕಳಿಸಲಿದ್ದಾರೆ ಎಂದು ಎಚ್ಚರಿಸಿದರು.ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು, ರೈತರ ವಿಮೆ ಹಣವನ್ನು ತಕ್ಷಣದಲ್ಲೇ ಬಿಡುಗಡೆ ಮಾಡಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಕೈಬಿಟ್ಟು ಹೋಗಿರುವ ತಾಳಿಕೋಟೆ, ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಗಾಲ ಸಮೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆಲ್ಲ ಬರಗಾಲ ಬಂದಾಗ ಈಡಿ ಜಿಲ್ಲೆಯನ್ನೇ ಬರಗಾಲ ಎಂದು ಘೋಷಿಸುತ್ತಿದ್ದರು, ಆದರೆ ಈ ಕಾಂಗ್ರೆಸ್ ಸರ್ಕಾರ ಬರದ ಗಂಭೀರತೆ ಅರಿಯದೆ ಬೇಕಾಬಿಟ್ಟಿಯಾಗಿ ಕೆಲವು ತಾಲೂಕುಗಳನ್ನು ಮಾತ್ರ ಘೋಷಣೆ ಮಾಡುತ್ತಿದೆ. ಆಡಳಿತ ಪಕ್ಷದ ಶಾಸಕರೇ ತಮ್ಮ ಸರ್ಕಾರ ಬೇಕಾಬಿಟ್ಟಿಯಾಗಿ ಬರ ಘೋಷಣೆ ಮಾಡುತ್ತಿದೆ. ಇದರಲ್ಲಿ ಉಸ್ತುವಾರಿ ಸಚಿವರು ರಾಜಕೀಯ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇಂಡಿ ಶಾಸಕರು ತಮ್ಮನ್ನು ಮಂತ್ರಿ ಮಾಡಿಲ್ಲವೆಂದು ರಾಜೀನಾಮೆ ಕೊಡಲು ಹೋದವರು ಅದೇ ಇಚ್ಛಾಶಕ್ತಿ, ಸ್ವಾಭಿಮಾನವನ್ನು ಇಂಡಿಯನ್ನು ಬರಗಾಲ ಎಂದು ಘೋಷಣೆ ಮಾಡುವಲ್ಲಿ ಯಾಕಿಲ್ಲ? ಎಂದು ಪ್ರಶ್ನಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ತೋರಿಸುತ್ತಿರುವ ರೈತ ವಿರೋಧಿ ನಿಲುವನ್ನು ವಿರೋಧಿಸಿ ಕಳೆದ 25 ದಿನಗಳಿಂದ ರೈತ ಸಂಘಟನೆಗಳು, ಬಿಜೆಪಿ, ಎನ್.ಡಿ.ಎ ಒಕ್ಕೂಟದೊಂದಿಗೆ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಹೋರಾಟದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ಡಾ.ಸುರೇಶ ಬಿರಾದಾರ, ಉಮೇಶ ಕಾರಜೋಳ, ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ರವೀಂದ್ರ ಲೋಣಿ, ರವಿಕಾಂತ ಬಗಲಿ, ಈರಣ್ಣ ರಾವೂರ, ಬಾಲರಾಜ ರೆಡ್ಡಿ, ಸ್ವಪ್ನಾ ಕಣಮುಚನಾಳ, ರಜನಿ ಸಂಬಣ್ಣಿ, ರಾಜಕುಮಾರ ಸಗಾಯಿ, ಅಣ್ಣಪ್ಪ ಖೈನೂರ ಇದ್ದರು.