ಮೆಕ್ಕೆಜೋಳ ಮತ್ತು ಭತ್ತದ ಬೆಳೆಗಳಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹ
ಹರಪನಹಳ್ಳಿ: ಮೆಕ್ಕೆಜೋಳ ಮತ್ತು ಭತ್ತದ ಬೆಳೆಗಳಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ತಕ್ಷಣ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಹರಿಹರ ವೃತ್ತದಿಂದ ಎತ್ತಿನಬಂಡಿಯ ಮೂಲಕ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರವಾಸಿ ಮಂದಿರ ವೃತ್ತದವರೆಗೂ ಬಂದು ತಲುಪಿತು. ಅಲ್ಲಿ ಬಹಿರಂಗ ಸಭೆ ನಡೆಸಿದ ಪ್ರತಿಭಟನಾಕಾರರು ನಂತರ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆಜೋಳಕ್ಕೆ ₹2400 ದರ ನಿಗದಿಪಡಿಸಿದ್ದು, ರಾಜ್ಯ ಸರ್ಕಾರ ಇದಕ್ಕೆ ₹600 ಸೇರಿಸಿ ಮೂರು ಸಾವಿರ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಅತಿಹೆಚ್ಚು ಮೆಕ್ಕೆಜೋಳ ಬೆಳೆಯುವ ರೈತರಿದ್ದಾರೆ. ಈ ವರ್ಷ ಅತಿವೃಷ್ಟಿಯಿಂದ ಬೆಳೆಗಳ ಇಳುವರಿ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲೂ ಸೂಕ್ತ ಬೆಲೆ ಸಿಗುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಿಎಂ ಕುರ್ಚಿ ಕಿತ್ತಾಟ ಬದಿಗಿಟ್ಟು ಕೂಡಲೇ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ, ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ ಮಾತನಾಡಿದರು. ಬಿಜೆಪಿ ಮುಖಂಡರಾದ ಆರುಂಡಿ ನಾಗರಾಜ, ಬಾಗಳಿ ಕೊಟ್ರೇಶಪ್ಪ, ಆರ್. ಲೋಕೇಶ್, ಎಂ. ಮಲ್ಲೇಶ, ಶಿರಾಗನಹಳ್ಳಿ ವಿಶ್ವನಾಥ, ಪುರಸಭೆ ಸದಸ್ಯರಾದ ಕಿರಣ್, ರೊಕ್ಕಪ್ಪ, ಜಾವೀದ್, ಗಂಗಾನಾಯ್ಕ, ಪಂಪನಾಯ್ಕ್, ಕಲ್ಲನಗೌಡ, ಶಿವಾಜಿನಾಯ್ಕ್, ಮಂಜುನಾಥ ಆರ್. ನಾಯ್ಕ್, ಸಿದ್ದೇಶ, ಪ್ರಸನ್ನಕುಮಾರ, ಯುವರಾಜ ನಾಯ್ಕ್, ಸಂತೋಷ ನಾಯ್ಕ್, ಮೆಹಬೂಬ್ ಸಾಹೇಬ್, ಜೆಟ್ಟಪ್ಪ, ಕೆಂಗಳ್ಳಿ ಪ್ರಕಾಶ ಪಾಲ್ಗೊಂಡಿದ್ದರು.
ಮೆಕ್ಕೆಜೋಳ ಬೆಂಬಲ ಬೆಲೆಗೆ ಅಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.