ಸಾರಾಂಶ
ಡಿಸಿ ಕಚೇರಿ ಎದುರು ಪ್ರತಿಭಟನೆ
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಕನ್ನಡಪ್ರಭ ವಾರ್ತೆ ಕೊಪ್ಪಳದಲಿತರು, ದೇವಸ್ಥಾನದ ಆಸ್ತಿಯ ಪಹಣಿಯಲ್ಲಿಯೂ ವಕ್ಫ್ ಹೆಸರು ಬರುತ್ತಿದೆ. ರಾಜ್ಯದಲ್ಲಿ ರೈತರು ಆತಂಕಗೊಂಡಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದನ್ನು ತೆಗೆಯಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡರು ಕೊಪ್ಪಳ ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇದು ದೊಡ್ಡ ಸಮಸ್ಯೆಯಾಗುತ್ತಿದೆ. ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ಏಕಾಏಕಿ ಬಂದಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಅದು ಈಗ ಬಂದಿದೆ, ನಮ್ಮ ಸರ್ಕಾರ ಇದ್ದಾಗ ಬಂದಿಲ್ಲ ಎಂದು ಉಡಾಫೆ ಮಾಡುವುದನ್ನು ಬಿಟ್ಟು, ಮೊದಲು ರೈತರ ಪಹಣಿಯಲ್ಲಿ ಸೇರಿದಂತೆ ರಾಜ್ಯ ಯಾವುದೇ ದೇವಸ್ಥಾನ ಸೇರಿದಂತೆ ಯಾವುದೇ ಆಸ್ತಿಯಲ್ಲಿ ಬಂದಿರುವ ವಕ್ಫ್ ಹೆಸರನ್ನು ಕೂಡಲೇ ತೆಗೆಸುವ ಕಾರ್ಯ ಮಾಡಲಿ, ಇಲ್ಲಿಯೂ ಕೂಡಾ ಸಮುದಾಯವೊಂದನ್ನು ತುಷ್ಟಿಕರಣ ಮಾಡುವ ಕಾರ್ಯ ಮಾಡದೆ ರಾಜ್ಯದ ರೈತರ ಹಿತಕಾಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು, ವಕ್ಸ್ ಕಾಯಿದೆಗೆ ತಿದ್ದುಪಡಿ ತರಲು ವಿಧೇಯಕ ಮಂಡಿಸಿದೆ. ಇದು ಜಂಟಿ ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಪರಿಶೀಲನೆಯಲ್ಲಿದೆ. ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ತನ್ನ ಕರಾಳ ಕೈಚಳಕ ತೋರಿಸಿ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿ ಕಬಳಿಸುವ ಹುನ್ನಾರಕ್ಕೆ ಕೈಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಕ್ಫ್ ಸಚಿವ ಜಮೀರ್ ಅಹ್ಮದ್ ಅವರೇ ಈ ಸಮಸ್ಯೆ ಹುಟ್ಟು ಹಾಕಿದ್ದಾರೆ. ವಿಶೇಷ ಸಭೆ ನಡೆಸಿ, ವಕ್ಫ್ ಬೋರ್ಡ್ ನಲ್ಲಿ ವಿನಾಕಾರಣ ಗೊತ್ತುವಳಿ ಮಾಡಿ, ಪಹಣಿಯಲ್ಲಿ ಹೆಸರು ಸೇರಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ರಾಜಕೀಯ ಮಾಡುವ ಬದಲು ಸಮಸ್ಯೆಯನ್ನು ನೀಗಿಸುವಂತೆ ಆಗ್ರಹಿಸಿದರು.ರಾಜೀನಾಮೆಗೆ ಆಗ್ರಹ:
ಸಚಿವ ಜಮೀರ್ ಅಹ್ಮದ್ ಅವರ ಪ್ರತಿಕೃತಿ ಮಾಡಿ, ಆಕ್ರೋಶ ವ್ಯಕ್ತಪಡಿಸಲಾಯಿತು. ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಸ್ಪಷ್ಟನೆ ನೀಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಲಾಯಿತು.ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯಿದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಎಂಎಲ್‌ಸಿ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ ಹೆಸರೂರು, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ನಗರ ಘಟಕ ಅಧ್ಯಕ್ಷ ರಮೇಶ ಕವಲೂರು, ಗ್ರಾಮೀಣ ಘಟಕ ಅಧ್ಯಕ್ಷ ಪ್ರದೀಪ ಹಿಟ್ನಾಳ, ನಗರಸಭೆ ಸದಸ್ಯರಾದ ಸರ್ವೇಶಗೌಡ, ಸೋಮಣ್ಣ ಹಳ್ಳಿ, ಮುಖಂಡರಾದ ಅಪ್ಪಣ್ಣ ಪದಕಿ, ರಾಜು ಬಾಕಳೆ, ಚಂದ್ರಶೇಖರ ಕವಲೂರು, ಪ್ರದೀಪಗೌಡ್ರ ಕವಲೂರು, ಅಜಯ ಪಾಟೀಲ್, ಸಿದ್ದಲಿಂಗಯ್ಯ ಇನಾಮದಾರ, ದೇವರಾಜ ಹಾಲಸಮುದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.