ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

| Published : Sep 25 2024, 12:51 AM IST

ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದ ಮುಖ್ಯಮಂತ್ರಿ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ದೆಹಲಿಯಲ್ಲಿ ಇತರ ರಾಜ್ಯದವರು ಕೇಳುತ್ತಿದ್ದಾರೆ. ಆ ಮಟ್ಟಕ್ಕೆ ಭ್ರಷ್ಟಾಚಾರದಲ್ಲಿ ಸರ್ಕಾರ ಅಪಕೀರ್ತಿ ಗಳಿಸಿದೆ. ಭ್ರಷ್ಟಾಚಾರ ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಸಂಸದ ಕಾಗೇರಿ ಆರೋಪಿಸಿದರು.

ಕಾರವಾರ: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಉಚ್ಚ ನ್ಯಾಯಾಲಯದಲ್ಲಿ ಸಿಎಂ ಅರ್ಜಿ ವಜಾ ಆಗಿರುವ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಹೈಕಮಾಂಡ್ ಸಂವಿಧಾನ ಗೌರವಿಸುವುದಿದ್ದರೆ ಸಿದ್ದರಾಮಯ್ಯ ರಾಜೀನಾಮೆಯನ್ನು ಕೂಡಲೆ ಪಡೆಯಬೇಕು. ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದಾಗಲೆ ರಾಜೀನಾಮೆ ಪಡೆಯಬೇಕಿತ್ತು. ಹೈಕೋರ್ಟ್ ರಾಜ್ಯಪಾಲರ ಆದೇಶ ಎತ್ತಿಹಿಡಿದ ನಂತರವೂ ರಾಜಕೀಯ ಆರೋಪ ಮಾಡುತ್ತ ಅಧಿಕಾರದಲ್ಲಿ ಮುಂದುವರಿಯುವುದು ಅವರ ಅಧಿಕಾರ ದಾಹ ಎತ್ತಿ ತೋರಿಸುತ್ತಿದೆ ಎಂದು ತಿಳಿಸಿದರು.ಕರ್ನಾಟಕದ ಮುಖ್ಯಮಂತ್ರಿ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ದೆಹಲಿಯಲ್ಲಿ ಇತರ ರಾಜ್ಯದವರು ಕೇಳುತ್ತಿದ್ದಾರೆ. ಆ ಮಟ್ಟಕ್ಕೆ ಭ್ರಷ್ಟಾಚಾರದಲ್ಲಿ ಸರ್ಕಾರ ಅಪಕೀರ್ತಿ ಗಳಿಸಿದೆ. ಭ್ರಷ್ಟಾಚಾರ ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದರು.ಡಿ.ಕೆ. ಶಿವಕುಮಾರ್ ಕೂಡ ಭ್ರಷ್ಟಾಚಾರಿ. ಸಿಎಂ ಮತ್ತು ಅವರಿಬ್ಬರ ನಡುವೆ ಕೇವಲ ಅಧಿಕಾರಕ್ಕಾಗಿ ಮಾತ್ರ ಅಲ್ಲ ಭ್ರಷ್ಟಾಚಾರದ ಸ್ಪರ್ಧೆಯೂ ಇದೆ. ಅಲ್ಪಸಂಖ್ಯಾತರ ಓಲೈಕೆ ಮಿತಿ ಮೀರಿದೆ ಎಂದು ಆಪಾದಿಸಿದರು.ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಸಿದ್ದರಾಮಯ್ಯ ಅಧಿಕಾರದಿಂದ ಕೆಳಗೆ ಇಳಿಯುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಬಿಜೆಪಿಗೆ ಭ್ರಷ್ಟರು ಎನ್ನುತ್ತಿದ್ದ ಸಿದ್ದರಾಮಯ್ಯ ಬಣ್ಣ ಈಗ ಬಯಲಾಗಿದೆ. ಗ್ಯಾರಂಟಿ ಯೋಜನೆ ಮುಂದೆ ಇಟ್ಟು ಸಿಎಂ ತಮ್ಮ ಮೇಲಿನ ಪ್ರಕರಣದ ಆರೋಪ ತಿರುಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ, ನಿಯಮಬಾಹಿರವಾಗಿ ನಿವೇಶನ ಪಡೆದ ಪ್ರಕರಣ ದಾಖಲಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ವಿರುದ್ಧವೇ ಪ್ರತಿಭಟನೆ ನಡೆಸಿದ್ದರು. ನ್ಯಾಯಾಲಯ ವಿಚಾರಣೆಗೆ ಅನುಮತಿಸಿ, ಮುಖ್ಯಮಂತ್ರಿ ಅರ್ಜಿಯನ್ನು ವಜಾಗೊಳಿಸಿದರೂ ಸಿದ್ದರಾಮಯ್ಯ ಇದನ್ನು ಒಪ್ಪಲು ಸಿದ್ದರಿಲ್ಲ ಎಂದು ಆರೋಪಿಸಿದರು.ಹಿಂದುಳಿದ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ನಾಯ್ಕ, ಗಂಭೀರ ಆರೋಪ ಬಂದಾಗ ರಾಮಕೃಷ್ಣ ಹೆಗಡೆ, ದೇವರಾಜ ಅರಸು ಅವರಂತಹವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಹಾದಿಯಲ್ಲಿ ಸಾಗದೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿದ್ದಾರೆ ಎಂದರು.ಪ್ರಮುಖರಾದ ನಾಗರಾಜ ನಾಯಕ, ಪ್ರಶಾಂತ ನಾಯ್ಕ, ನಯನಾ ನೀಲಾವರ, ಸುನೀಲ ಸೋನಿ ಇತರರು ಇದ್ದರು.ಸಿದ್ದರಾಮಯ್ಯ ರಾಜೀನಾಮೆ ನೀಡುವ ತನಕ ಹೋರಾಟ: ಕಾಗೇರಿ

ಕಾರವಾರ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ವರೆಗೂ ಬಿಜೆಪಿ ಹೋರಾಟ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎಚ್ಚರಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ. ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಲ್ಲಿ ಇದ್ದರೆ ತನಿಖೆಗೆ ತೊಡಕಾಗುತ್ತದೆ. ಈ ನಿಟ್ಟಿನಲ್ಲಿ ಅವರು ಕೂಡಲೇ ರಾಜೀನಾಮೆ ಕೊಡಲೇಬೇಕು ಎಂದು ಬಿಜೆಪಿ ಆಗ್ರಹಿಸಲಿದೆ ಎಂದರು.ಸಿದ್ದರಾಮಯ್ಯ ಅವರ ಕುಟುಂಬದ ಮೇಲಿನ ಆರೋಪ ಸ್ಪಷ್ಟವಾಗಿದೆ. ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವದ ವ್ಯವಸ್ಥೆ ಬಗ್ಗೆ ಗೌರವ ಕೊಡಬೇಕಾದರೆ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಬೇಕು. ಈ ನಿಟ್ಟಿನಲ್ಲಿ ಜನರಿಗೆ ಸಂದೇಶವನ್ನು ಕಾಂಗ್ರೆಸ್‌ನವರು ಕೊಡಬೇಕು ಎಂದರು.ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ಕಾಂಗ್ರೆಸ್ ಹಣ ಕಳಿಸುವ ಎಟಿಎಂ ಆಗಿ ಈ ಸರ್ಕಾರ ಇರುವುದರಿಂದ ಅವರ ರಾಜೀನಾಮೆ ಪಡೆಯಲು ಹೈಕಮಾಂಡ್ ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿದ್ದರಾಮಯ್ಯನವರು ರಾಜೀನಾಮೆ ಕೊಡುವವರೆಗೂ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ಮುಖಂಡರಾದ ನಾಗರಾಜ ನಾಯಕ, ಸುನೀಲ್ ಸೋನಿ, ನಾಗೇಶ್ ಕುರ್ಡೇಕರ್, ಸಂಜಯ್ ಸಾಳಂಕೆ, ಸುಭಾಷ್ ಗುನಗಿ ಮತ್ತಿತರರು ಇದ್ದರು.