ಸಾರಾಂಶ
ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದಲ್ಲಿ ಕುಡಿಯುವ ನೀರಿಗಾಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಸಾಗಿ ನಗರಸಭೆ ಮುಂದೆ ಪ್ರತಿಭಟಿಸಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ನಗರದಲ್ಲಿ ೧೫ ಲಕ್ಷ ಲೀಟರ್ ಗಾತ್ರ ಉಳ್ಳ ಜೂನಿಯರ್ ಕಾಲೇಜು ಮೈದಾನದಲ್ಲಿನ ಒವರ್ ಹೆಡ್ ಟ್ಯಾಂಕ್ ಕಾಮಗಾರಿ ಸ್ಥಗಿತಗೊಂಡು ಜನತೆಗೆ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಅಲ್ಲದೆ ಪದೇ ಪದೇ ನಗರದಲ್ಲಿ 24/7 ನೀರಿನ ಸಮಸ್ಯೆಯಾಗುತ್ತಿದೆ. ನಗರದ ಬಹುತೇಕ ವಾರ್ಡ್‌ನಲ್ಲಿ ನೀರೇ ಬರುತ್ತಿಲ್ಲ. ಒಮ್ಮೊಮ್ಮೆ ರಾತ್ರಿ ಎರಡ್ಮೂರು ಗಂಟೆಗೆ ಬರುತ್ತಿವೆ. ಹೀಗಾಗಿ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ಇಡೀ ನಗರ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ತಾಲೂಕಿನಲ್ಲಿ ಜನರ ಅಭಿವೃದ್ಧಿಗಿಂತ ಸ್ವಂತ ಅಭಿವೃದ್ಧಿ ಹೆಚ್ಚಾಗಿದೆ. ಶಾಸಕರಿಂದ ಹಾಗೂ ಅವರ ಹಿಂಬಾಲಕರಿಂದ ಕಮಿಷನ್ ನಡೆಯುತ್ತಿದೆ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲ ಎಂದು ಆರೋಪಿಸಿದರು.
ಜನರ ವಿಷಯದಲ್ಲಿ ದುರುದ್ದೇಶದ ರಾಜಕಾರಣ ಸಲ್ಲದು. ಜನರಿಗೆ ಮೂಲಭೂತವಾಗಿ ಕುಡಿಯುವ ನೀರನ್ನು ಒದಗಿಸಿ ಇಲ್ಲದಿದ್ದರೆ ಉಗ್ರವಾದ ಹೋರಾಟಕ್ಕೆ ಜನರ ಪರವಾಗಿ ಸಿದ್ಧ ಎಂದು ಎಚ್ಚರಿಕೆ ನೀಡಿದರು.ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಕಳ್ಳರನ್ನು ಹಿಡಿಯುವ ಕೆಲಸ ಪೊಲೀಸರಿಂದ ಆಗುತ್ತಿಲ್ಲ. ಅಲ್ಲದೆ ನಗರದಲ್ಲಿ ಡ್ರಗ್ಸ್ ಮಾಫಿಯಾ ಕೂಡ ಹೆಚ್ಚುತ್ತಿದೆ. ಇದರಿಂದ ಯುವಕರು ಹಾಳಾಗುತ್ತಿದ್ದಾರೆ ಎಂದು ದೊಡ್ಡನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು, ನಗರಸಭೆಯ ಮಾಜಿ ಅಧ್ಯಕ್ಷ, ಸದಸ್ಯರು, ಕಾರ್ಯಕರ್ತರು, ಉಪಸ್ಥಿತರಿದ್ದರು.