ವಕ್ಫ್‌ ವಿರುದ್ಧ ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ

| Published : Nov 22 2024, 01:17 AM IST

ವಕ್ಫ್‌ ವಿರುದ್ಧ ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನದಾತರು ಹಾಗೂ ಮಠ ಮಾನ್ಯಗಳ ಜಮೀನುಗಳಿಗೆ ಕೈ ಹಾಕಿರುವ ದುರ್ಮಾಗ ಕೆಲಸಕ್ಕೆ ಕೈ ಹಾಕಲಾಗಿದೆ.

ಬಳ್ಳಾರಿ: ರಾಜ್ಯದ ಮಠ-ಮಾನ್ಯಗಳು, ರೈತರ ಜಮೀನುಗಳು ವಕ್ಫ್ ಮಂಡಳಿಗೆ ವರ್ಗಾವಣೆಯಾಗುತ್ತಿರುವುದನ್ನು ಖಂಡಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಇಡೀ ರಾಜ್ಯದಲ್ಲಿ ಸಾವಿರಾರು ಎಕರೆ ಜಮೀನನ್ನು ವಕ್ಫ್‌ ಬೋರ್ಡ್‌ಗೆ ವರ್ಗಾಯಿಸುವ ಕೃತ್ಯ ನಡೆದಿದೆ. ಕೇಂದ್ರ ಸರ್ಕಾರ ವಕ್ಫ್‌ ಗೆ ತಿದ್ದುಪಡಿ ತರುವ ಮುನ್ನವೇ ದೇಶದಲ್ಲಿ ಲಕ್ಷಾಂತರ ಭೂಮಿಯನ್ನು ಕಬಳಿಸುವ ಹುನ್ನಾರ ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ನಡೆದಿದೆ. ಸಚಿವ ಸಮೀರ್ ಅಹ್ಮದ್ ಔರಂಗಜೇಬ್‌ನ ಮೊಮ್ಮಗನಂತೆ ವರ್ತಿಸುತ್ತಿದ್ದಾನೆ. ಅನ್ನದಾತರು ಹಾಗೂ ಮಠ ಮಾನ್ಯಗಳ ಜಮೀನುಗಳಿಗೆ ಕೈ ಹಾಕಿರುವ ದುರ್ಮಾಗ ಕೆಲಸಕ್ಕೆ ಕೈ ಹಾಕಲಾಗಿದ್ದು, ಕಾಂಗ್ರೆಸ್‌ಗೆ ರಾಜ್ಯದಲ್ಲಿ ಕೆಟ್ಟಕಾಲ ಶುರುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಈ ಹಿಂದಿನ ನಿಜಾಮರು, ನವಾಬರಂತೆ ವರ್ತಿಸುತ್ತಿದೆ. ವಕ್ಫ್‌ ಬೋರ್ಡ್‌ ರೈತರ ಜಮೀನಿನ ಮೇಲೆ ಕಣ್ಣಾಯಿಸಿದ ಬಳಿಕ ಬೆಳಿಗ್ಗೆ ಎದ್ದು ರೈತರು ಪಹಣಿಯನ್ನು ಪರಿಶೀಲಿಸಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರದ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಜನವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ಧ ಹೋರಾಟ ನಿರಂತರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಪ್ರತಿಭಟನಾಕಾರರು, ವಕ್ಫ್‌ ಬೋರ್ಡ್ ರದ್ದು ಮಾಡಬೇಕು. ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದು ಘೋಷಣೆಗಳನ್ನು ಕೂಗಿದರು.

ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಮುಖಂಡರಾದ ಎಸ್‌.ಗುರುಲಿಂಗನಗೌಡ, ಗಣಪಾಲ್ ಐನಾಥರೆಡ್ಡಿ, ಕೆ.ಎಂ. ಮಹೇಶ್ವರಸ್ವಾಮಿ, ಪಾಟೀಲ್ ಸಿದ್ದಾರೆಡ್ಡಿ, ಡಾ.ಅರುಣಾ ಕಾಮಿನೇನಿ, ಮಾಜಿ ಶಾಸಕ ಸೋಮಲಿಂಗಪ್ಪ, ಡಾ.ಎಸ್‌.ಜೆ.ವಿ. ಮಹಿಪಾಲ್, ಮಲ್ಲೇಶ್ ಕುಮಾರ್, ಪಾಲಿಕೆ ಸದಸ್ಯ ಗುಡಿಗಂಟಿ ಹನುಮಂತು, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಗುಣಾ, ದಮ್ಮೂರು ಶೇಖರ್, ಪುಷ್ಪಾ ಚಂದ್ರಶೇಖರ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಕ್ಫ್ ಮಂಡಳಿ ವಿರುದ್ಧ ಬಳ್ಳಾರಿ ಡಿಸಿ ಕಚೇರಿ ಎದುರು ಬಿಜೆಪಿಯ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಗುರುವಾರ ಪ್ರತಿಭಟನಾ ಧರಣಿ ನಡೆಸಿದರು.