ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಇಂದು ಬಿಜೆಪಿ ಹೋರಾಟ

| Published : Jun 17 2024, 01:31 AM IST

ಸಾರಾಂಶ

ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಮೇಲೆ ಬರೆ ಎಳೆಯಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಸೋಮವಾರದಿಂದ ಜಿಲ್ಲಾ ಮಟ್ಟದಲ್ಲಿ ಉಗ್ರವಾದ ಹೋರಾಟ ನಡೆಸಿ ನಂತರ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಸಭೆ ಮಾಡಿ ನಿರ್ಧರಿಸಲಾಗುವುದು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ । ಗ್ಯಾರಂಟಿ ಯೋಜನೆಗೆ ರಾಜ್ಯದ ಜನರಿಗೆ ಬರೆ । ರಾಜ್ಯ ಸರ್ಕಾರದ ವಿರುದ್ಧ ಖಂಡನೆ

ಕನ್ನಡಪ್ರಭ ವಾರ್ತೆ ಹಾಸನ

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಎರಿಕೆ ಮೂಲಕ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಜನರ ಮೇಲೆ ಬರೆ ಎಳೆಯಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಸೋಮವಾರದಿಂದ ಜಿಲ್ಲಾ ಮಟ್ಟದಲ್ಲಿ ಉಗ್ರವಾದ ಹೋರಾಟ ನಡೆಸಿ ನಂತರ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲು ಸಭೆ ಮಾಡಿ ನಿರ್ಧರಿಸಲಾಗುವುದು ಎಂದು ಹಾಸನದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ರಿಂಗ್ ರಸ್ತೆ ಬಳಿ ಮಾಧ್ಯಮದೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷ ಹತಾಷವಾಗಿ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದೆ. ಯಾರೂ ಕೂಡ ಊಹಿಸದ ರೀತಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಜನರು ಶಾಪ ಹಾಕುತ್ತಿದ್ದಾರೆ. ಬರಗಾಲದ ಬೇಗೆಯಿಂದ ಇನ್ನೂ ಹೊರ ಬರಲು ಸಾದ್ಯವಾಗಿಲ್ಲ. ಈಗ ಪೆಟ್ರೋಲ್, ಡೀಸೆಲ್ ದರ ಹೆಚ್ಚು ಮಾಡಿದ್ದಾರೆ. ಇದರಿಂದ ಸಾಗಣೆ ವೆಚ್ಚ, ತರಕಾರಿ ಬೆಲೆ ಜಾಸ್ತಿ ಆಗುತ್ತದೆ. ರೈತರಿಗೂ ಅನಾನುಕೂಲ ಆಗಲಿದೆ. ರೈತರ ಪಂಪ್‌ಸೆಟ್, ಟ್ರ್ಯಾಕ್ಟರ್ ಹೊರೆಯಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ರೀತಿಯಲ್ಲಿ ರಾಜ್ಯ ಸರ್ಕಾರ ಬೇಜವಾಬ್ದಾರಿತನದಿಂದ ನಡೆದುಕೊರ್ಳಳುತಿರುವುದರಿಂದ ಈ ಬಗ್ಗೆ ಖಂಡಿಸಲು ಬಿಜೆಪಿಯಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಜೂನ್ ೧೭ ರಂದು ಜಿಲ್ಲಾ ಕೇಂದ್ರದಲ್ಲಿ ಹೋರಾಟ ಮಾಡುತ್ತೇವೆ. ಮತ್ತೆ ಏನು ಮಾಡಬೇಕೆಂದು ನಾಳೆ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ.

‘ಕಳೆದ ಒಂದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಯಾವುದೇ ಹೊಸ ಯೋಜನೆ ಕೊಡಲು ಸಾಧ್ಯವಾಗಿಲ್ಲ. ಗ್ಯಾರಂಟಿ ಗ್ಯಾರಂಟಿ ಎಂದು ಹೇಳಿಕೊಂಡು ಹಣ ಹೊಂದಿಸಲು ಆಗುತ್ತಿಲ್ಲ. ಒಂದು ಕಡೆ ಯಥೇಚ್ಛವಾಗಿ ಸಾಲ, ೭೦ ರಿಂದ ೮೦ ಸಾವಿರ ಕೋಟಿ ರು. ಸಾಲ ಮಾಡಿ ರಾಜ್ಯದ ಜನರಿಗೆ ಹೊರೆ ಹಾಕುತ್ತಿದ್ದಾರೆ. ಇನ್ನೊಂದು ಕಡೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಬರೆ ಎಳೆದಿದ್ದಾರೆ. ಇದೆಲ್ಲವನ್ನು ನಾವು ಬೇರೆ ಬೇರೆ ಸಂಘಟನೆ ಮಾತಾಡಿ ಮುಂದಿನ ಹೋರಾಟ ತೀರ್ಮಾನ ಮಾಡಲಾಗುವುದು’ ಎಂದು ಹೇಳಿದರು.

ತೆರಿಗೆ ಹಣ ಅಭಿವೃದ್ಧಿಗೆ ಬಳಕೆ ಎಂಬ ಸಚಿವ ಎಂ.ಬಿ. ಪಾಟೀಲ್ ಹೇಳಿಕೆ ವಿಚಾರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಕಳೆದ ಒಂದು ವರ್ಷದಲ್ಲಿ ಯಾವ ಅಭಿವೃದ್ಧಿ ಆಗಿದೆ? ಒಂದು ವರ್ಷದಲ್ಲಿ ಸಿಎಂ ಸೇರಿ ಯಾವುದೇ ಶಂಕುಸ್ಥಾಪನೆ ಮಾಡಿಲ್ಲ. ಅಭಿವೃದ್ಧಿ ಅಗಿಲ್ಲ. ಹೊಸ ಯೋಜನೆಯನ್ನು ಇನ್ನು ಘೋಷಣೆ ಮಾಡಿಲ್ಲ. ಯಾವುದೇ ಶಾಸಕರ ಕ್ಷೇತ್ರದಲ್ಲಿ ಒಂದೇ ಒಂದು ಶಾಲಾ ಕೊಠಡಿ ಕಟ್ಟಲು ಸಾದ್ಯವಾಗಿಲ್ಲ. ಆಸ್ಪತ್ರೆ ರಸ್ತೆ ಮಾಡಲು ಸಾದ್ಯವಾಗುತ್ತಿಲ್ಲ. ಯಾವುದೇ ಪಕ್ಷದ ಶಾಸಕರು ಕ್ಷೇತ್ರದಲ್ಲಿ ತಲೆ ಎತ್ತಿ ಓಡಾಡಲು ಆಗದ ಪರಿಸ್ಥಿತಿ ಈ ಸರ್ಕಾರ ಬಂದ ನಂತರ ಆಗಿದೆ’ ಎಂದು ಕುಟುಕಿದರು.

ಯಾರೇ ಆದರೂ ಶಿಕ್ಷೆಯಾಗಬೇಕು:

ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಬಂಧನ ವಿಚಾರವಾಗಿ ಮಾತನಾಡಿ, ‘ಇಂತಹ ಹೇಯ ಕೃತ್ಯ ಮಾಡಿದವರು ಯಾರೇ ಆದರೂ ತಕ್ಕ ಶಿಕ್ಷೆ ಆಗಬೇಕು. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಯಾರೂ ತಲೆ ಎತ್ತಿ ಓಡಾಡಲು ಆಗದಂತಾಗಿದೆ. ಯಾರೇ ಪ್ರಭಾವಿ ಇದ್ದರೂ ಕೂಡ ಸೂಕ್ತ ಕ್ರಮ ಆಗಬೇಕು’ ಎಂದು ಒತ್ತಾಯಿಸಿದರು.

ಶಾಸಕ ಎಚ್.ಕೆ.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಅಮಿತ್ ಶೆಟ್ಟಿ, ಎಚ್.ಎನ್.ನಾಗೇಶ್, ಪ್ರೀತಿವರ್ಧನ್, ಬಿ.ಎಚ್. ನಾರಾಯಣಗೌಡ ಇತರರು ಇದ್ದರು.ಫೋಟೋ:ಹಾಸನದ ರಿಂಗ್ ರಸ್ತೆ ಬಳಿ ಮಾಧ್ಯಮದೊಂದಿಗೆ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು,