ಸಿ.ಟಿ. ರವಿ ಬಂಧನ ಖಂಡಿಸಿ ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆ

| Published : Dec 21 2024, 01:17 AM IST

ಸಿ.ಟಿ. ರವಿ ಬಂಧನ ಖಂಡಿಸಿ ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೊಪ್ಪಳ: ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾವು ಸದನದಲ್ಲಿಯೇ ಇದ್ದರೂ ಕೇಳದ್ದು, ಅವರಿಗೆ ಹೇಗೆ ಕೇಳಿತು? ಎಂದು ಪ್ರಶ್ನೆ ಮಾಡಿದರು.

ಇದೆಲ್ಲವೂ ಕಾಂಗ್ರೆಸ್ ನಾಯಕರ ಷಡ್ಯಂತ್ರವಾಗಿದೆ. ಇಂಥ ಸುಳ್ಳ ಆರೋಪ ಮಾಡಿದ್ದೂ ಅಲ್ಲದೆ ಏಕಾಏಕಿ ವಿಧಾನಪರಿಷತ್ ಸದಸ್ಯರನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲ, ರಾತ್ರಿಯೆಲ್ಲ ಪೊಲೀಸ್ ವಾಹನದಲ್ಲಿ ಎಲ್ಲೆಂದರಲ್ಲಿ ಸುತ್ತಾಡಿಸಿದ್ದಾರೆ. ಈ ವೇಳೆಯಲ್ಲಿ ಅವರಿಗೆ ಗಾಯವಾಗಿದ್ದರೂ ಕನಿಷ್ಠ ಚಿಕಿತ್ಸೆ ನೀಡಿಲ್ಲ. ಇಂಥ ಆಡಳಿತವನ್ನು ನಾವು ನೋಡಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಮಹೇಶ ಅಂಗಡಿ ಮಾತನಾಡಿ, ಭಾರತೀಯ ಜನತಾ ಪಕ್ಷ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರೂ ಮಹಿಳೆಯರಿಗೆ ಅಪಮಾನ ಮಾಡುವುದಿಲ್ಲ. ಹೀಗಿರುವಾಗ ವಿಧಾನಪರಿಷತ್ ಸದಸ್ಯರು ಹೇಗೆ ತಾನೆ ಆ ರೀತಿ ಮಾತನಾಡಲು ಸಾಧ್ಯ. ಅಷ್ಟಕ್ಕೂ ಕಾನೂನು ರೀತಿಯ ಕ್ರಮಕೈಗೊಳ್ಳಲಿ, ಅದು ಬಿಟ್ಟು ಕಾಂಗ್ರೆಸ್ ಗೂಂಡಾಗಳು ವಿಧಾನಪರಿಷತ್ ಸದಸ್ಯರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ವಿಪ ಸದಸ್ಯರ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯರ ಸ್ಥಿತಿ ಹೇಗೆ ಎಂದು ಆಕ್ರೋಶ ಹೊರಹಾಕಿದರು.

ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತಕ್ಕೆ ಇದು ಉದಾಹರಣೆಯಾಗಿದೆ. ಸಿ.ಟಿ. ರವಿ ಅವರ ಪರವಾಗಿ ರಾಜ್ಯಾದ್ಯಂತ ಹೋರಾಟ ನಡೆಯುತ್ತಿದ್ದು, ಇದು ಇನ್ನೂ ತೀವ್ರಗೊಳ್ಳಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಣ್ಣವರ ಹಾಗೂ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಮೈನಳ್ಳಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಮನವಿ

ಕಾಂಗ್ರೆಸ್ ಸರ್ಕಾರದಲ್ಲಿ ಅರಾಜಕತೆ ಶುರುವಾಗಿದ್ದು, ವಿಪ ಸದಸ್ಯರನ್ನೇ ಸುವರ್ಣಸೌಧದದಲ್ಲಿಯೇ ಬಂಧಿಸುತ್ತಿದ್ದಾರೆ. ಹೀಗಾಗಿ, ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ, ಅಕ್ರಮವಾಗಿ ಬಂಧಿಸಿರುವ ವಿಪ ಸದಸ್ಯ ಸಿ.ಟಿ. ರವಿ ಅವರನ್ನು ಬಿಡುಗಡೆ ಮಾಡಿಸುವಂತೆ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ತಾಲೂಕು ಅಧ್ಯಕ್ಷ ಪ್ರದೀಪ ಹಿಟ್ನಾಳ, ನಗರ ಅಧ್ಯಕ್ಷ ರಮೇಶ ಕವಲೂರು, ಫಕೀರಪ್ಪ ಆರೇರ, ವಾಣಿಶ್ರೀ ಮಠದ, ಚಂದ್ರಶೇಖರ ಕವಲೂರು, ರಾಜು ಬಾಕಳೆ, ಗಣೇಶ ಹೊರತಟ್ನಾಳ, ದೇವರಾಜ ಹಾಲಸಮುದ್ರ, ಮಹಾಲಕ್ಷ್ಮೀ ಕಂದಾರಿ, ಶರಣಯ್ಯ, ಉಮೇಶ ಕುರುಡೇಕರ, ರವಿಚಂದ್ರ ಮಾಲೀಪಾಟೀಲ್ ಮೊದಲಾದವರು ಇದ್ದರು.