ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರದಲ್ಲಿ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಡಿವೈಎಸ್ ಪಿ ಕಚೇರಿ ಮುಂಭಾಗದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಬಳಿ ವಿನಯ್ ಮೃತದೇಹ ಇರಿಸಿ, ಕೊಡಗಿನ ಇಬ್ಬರು ಶಾಸಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.
ಜಿಲ್ಲೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರು ವಿನಯ್ ಸೋಮಯ್ಯ ಕುಟುಂಬವನ್ನು ಭೇಟಿಯಾದರು. ನೋಂದ ಕುಟುಂಬಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸಾಂತ್ವನ ಹೇಳಿದರು.ಡಿವೈಎಸ್ ಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಯದುವೀರ್, ಪ್ರತಾಪ್ ಸಿಂಹ, ಕೆ. ಜಿ ಬೋಪಯ್ಯ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಸ್ಥಳಾಂತರ ಮಾಡಲಾಯಿತು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ವಿನಯ್ ಸೋಮಯ್ಯ ಅವರಿಗೆ ಕೊಡಗಿನ ಇಬ್ಬರು ಶಾಸಕರಿಂದಲೂ ಕಿರುಕುಳವಾಗಿದೆ. ಹೈಕೋರ್ಟ್ ತಡೆಯಾಜ್ಞೆ ಬಳಿಕವೂ ಶಾಸಕರು ಪೊಲೀಸರ ಮೂಲಕ ಕಿರುಕುಳ ನೀಡಿದ್ದಾರೆ. ಕಿರುಕುಳವೇ ವಿನಯ್ ಆತ್ಮಹತ್ಯೆಗೆ ಕಾರಣ ಎಂದು ವಿನಯ್ ಉಲ್ಲೇಖಿಸಿದ್ದಾರೆಂದು ಪ್ರತಿಕ್ರಿಯೆ ನೀಡಿದರು.ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಮಂತರ್ ಗೌಡ ಅವರ ವಿರುದ್ಧ ಎಫ್ ಐ ಆರ್ ದಾಖಲೆ ಮಾಡಬೇಕು. ಅಲ್ಲದೆ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಆತ್ಮಹತ್ಯೆಗೆ ಕಾರಣಕರ್ತರಾದವರ ಹೆಸರು ಸ್ಪಷ್ಟವಾಗಿ ಉಲ್ಲೇಖವಿದೆ. ಆದರೆ, ಪ್ರಕರಣದಲ್ಲಿ ಶಾಸಕರುಗಳ ಹೆಸರು ಸೇರಿಸಿಲ್ಲ. ಪೊಲೀಸರ ಮೇಲೆ ಒತ್ತಡಕ್ಕೆ ಇದೇ ಸ್ಪಷ್ಟ ಸಾಕ್ಷಿ ಎಂದು ಹೇಳಿದರು.ವ್ಯಾಟ್ಸಾಪ್ ಗ್ರೂಪ್ ಅಡ್ಮಿನ್‌ಗಳ ಮೇಲೆ ಕೇಸ್ ಮೊಕದ್ದಮೆ ಮೂಲಕ ಬೆದರಿಸುವ ಹೊಸ ಷಡ್ಯಂತ್ರ ಕೊಡಗಿನಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತೆ ಆಗಿವೆ. ಜನರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಎಫ್‌ಐಆರ್‌ನಲ್ಲಿ ಇಬ್ಬರು ಶಾಸಕರ ಹೆಸರು ಸೇರಿಸಿ ಇಲ್ಲದಿದ್ದರೆ ಮುಂದೆ ಹೆಚ್ಚು ಕಡಿಮೆ ಆದರೆ ನಾವು ಹೊಣೆಗಾರರಲ್ಲ ಎಂದು ನೇರವಾಗಿ ಪೊಲೀಸ್ ಇಲಾಖೆಗೆ ಹೇಳಿದ್ದಾರೆ.ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಶಾಸಕ ಪೊನ್ನಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕ ಪೊನ್ನಣ್ಣ ಅವರಿಗೆ ನಾಚಿಕೆಯಾಗಬೇಕು. ಅವರೊಬ್ಬರೇ ಅಲ್ಲ, ಕಾನೂನು ನಮಗೂ ಗೊತ್ತಿದೆ. ಅವರೊಬ್ಬರೇ ಪಂಡಿತರಲ್ಲ. ನಮ್ಮ ಮೇಲೆ ಆರೋಪ ಮಾಡುವ ಅವಶ್ಯಕತೆ ಇಲ್ಲ. ನಾವು ಈ ಪ್ರಕರಣವನ್ನು ಅಷ್ಟು ಸುಲಭದಲ್ಲಿ ಬಿಡುವುದಿಲ್ಲ ನಮ್ಮ ಕಾರ್ಯಕರ್ತನಿಗೆ ಆದ ನೋವನ್ನು ಕೂಡ ನಾವು ಮರೆಯುವುದಿಲ್ಲ ಎಂದು ತಿರುಗೇಟು ನೀಡಿದರು.
ಕೊಡಗು-ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಮಾತನಾಡಿ ಕೊಡಗಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಅನಗತ್ಯ ವಾಗಿ ಕೇಸ್ ದಾಖಲಾಗುತ್ತಿದೆ. ಕಾಂಗ್ರೆಸ್ ಕೊಡಗು ಜಿಲ್ಲೆಯಲ್ಲಿ ಕಾನೂನು ಗಾಳಿಗೆ ತೂರುತ್ತಿದೆ. ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡುತ್ತಿದೆ. ಇಬ್ಬರು ಶಾಸಕರ ವಿರುದ್ಧ ಎಫ್ ಐ ಆರ್ ದಾಖಲಿಸಲು ಹಿಂದೇಟು ಯಾಕೆ.? ಎಂದು ಯದುವೀರ್ ಪ್ರಶ್ನಿಸಿದರು.ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ವಿನಯ್ ಸೋಮಯ್ಯಗೆ ಪೊಲೀಸರ ಮೂಲಕ ಜಿಲ್ಲೆಯ ಇಬ್ಬರು ಶಾಸಕರು ಕಿರುಕುಳ ನೀಡಿದ್ದಾರೆ. ಅಡ್ಮಿನ್ ವಿರುದ್ಧ ಹೇಗೆ ಎಫ್ ಐ ಆರ್ ಆಗುತ್ತದೆ. ನಮ್ಮ ಶಾಸಕರು ಈ ವರೆಗೆ ಯಾವುದೇ ಕಾಂಗ್ರೆಸ್ ಕಾರ್ಯಕರ್ತನಿಗೆ ಈ ರೀತಿ ಮಾಡಿಲ್ಲ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮೈಸೂರು ಶಾಸಕ ಶ್ರೀವತ್ಸ, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಬಿಗಿ ಬಂದೋಬಸ್ತ್ : ಬಿಜೆಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಡಿವೈಎಸ್ ಪಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ದಕ್ಷಿಣ ವಲಯ ಡಿ. ಐ. ಜಿ. ಬೋರಲಿಂಗಯ್ಯ ನೇತೃತ್ವದಲ್ಲಿ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮೈಸೂರು ಎಸ್. ಪಿ. ವಿಷ್ಣುವರ್ಧನ್, ಹಾಸನ ಎಸ್. ಪಿ.ಸುಜಿತಾ ಸಲ್ಮಾನ್, ಮೈಸೂರು ಕ್ರೈಂ ಡಿಸಿಪಿ ಸುಂದರ ರಾಜ್, ಹಾಸನ, ಮಂಡ್ಯ ಹೆಚ್ಚುವರಿ ಎಸ್. ಪಿ.. 400 ಪೊಲೀಸರು, 5 ಕೆ. ಎಸ್. ಆರ್. ಪಿ. ತುಕಡಿ, 4 ಜಿಲ್ಲಾ ಪೊಲೀಸ್ ಸಶಸ್ತ್ರ ಪಡೆ ಕುಶಾಲನಗರದಲ್ಲಿ ನಿಯೋಜನೆ ಮಾಡಲಾಗಿತ್ತು.
;Resize=(128,128))
;Resize=(128,128))
;Resize=(128,128))
;Resize=(128,128))