ಮುಖ್ಯಮಂತ್ರಿ ರಾಜಿನಾಮೆ ಆಗ್ರಹಿಸಿ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ

| Published : Aug 23 2024, 01:11 AM IST

ಮುಖ್ಯಮಂತ್ರಿ ರಾಜಿನಾಮೆ ಆಗ್ರಹಿಸಿ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿದ್ದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ.

ಮುಡಾದಿಂದ ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಿನಲ್ಲಿ ನಿವೇಶನಗಳನ್ನು ಪಡೆದುಕೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದ್ದಾರೆ.ಮುಡಾ ಪ್ರಕರಣ ಮತ್ತು ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಬಿಜೆಪಿ ಕಾರ್ಯಕರ್ತರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಅಸಮಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತನಿಖೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು.

ಮುಡಾದಿಂದ ನಿವೇಶನ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನ್ಯಾಯಯುತವಾಗಿ ಪ್ರಾಸಿಕ್ಯೂಶನ್‌ಗೆ ಅವಕಾಶ ನೀಡಿದ್ದಾರೆ. ಹೀಗಿದ್ದೂ, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ವಿರುದ್ಧ ಟೀಕೆ ಮಾಡುತ್ತಿರುವುದು ಖಂಡನೀಯ ಎಂದು ರವಿ ಕಾಳಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬರೋಬ್ಬರಿ 14 ನಿವೇಶನಗಳನ್ನು ನುಂಗಿದ್ದಾರೆ. ಇದನ್ನು ತನಿಖೆ ಮಾಡಲು ರಾಜ್ಯಪಾಲರು ಅನುಮತಿ ನೀಡಿದರೆ ಕಾಂಗ್ರೆಸ್ ನಾಯಕರು ಮನಸ್ಸೋ ಇಚ್ಛೆ ರಾಜ್ಯಪಾಲರನ್ನು ನಿಂದಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು.

ಈ ಹಿಂದೆ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ತನಿಖೆ ಸಂದರ್ಭ ಅವರ ರಾಜೀನಾಮೆ ಕೇಳಿದ್ದ ಸಿದ್ದರಾಮಯ್ಯ ಅವರು, ಈಗ ತಮ್ಮ ವಿರುದ್ಧ ಆರೋಪಗಳಿದ್ದರೂ ಯಾಕೆ ರಾಜೀನಾಮೆ ನೀಡುತ್ತಿಲ್ಲವೆಂದು ಪ್ರಶ್ನಿಸಿದರು.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆ ಮೂಲಕ ಜಿಲ್ಲಾಡಳಿತದ ಭವನಕ್ಕೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನಾ ಮೆರವಣಿಗೆಯ ಉದ್ಧಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪಕ್ಷದ ಪ್ರಮುಖರಾದ ರಾಬಿನ್ ದೇವಯ್ಯ, ಸುವಿನ್ ಗಣಪತಿ, ಅನಿತಾ ಪೂವಯ್ಯ, ಭಾರತೀಶ್, ಯಮುನಾ ಚಂಗಪ್ಪ, ತಳೂರು ಕಿಶೋರ್ ಕುಮಾರ್, ಕನ್ನಂಡ ಸಂಪತ್, ಕವನ್ ಕಾರ್ಯಪ್ಪ, ನೆಲ್ಲೀರ ಚಲನ್, ಕೋಡಿ ಪೊನ್ನಪ್ಪ, ಮಹೇಶ್ ಜೈನಿ, ಮನು ಮಂಜುನಾಥ್, ನಾಗೇಶ್ ಕುಂದಲ್ಪಾಡಿ, ಕಾಂಗೀರ ಸತೀಶ್, ಉಮೇಶ್ ಸುಬ್ರಮಣಿ, ಬಿ.ಕೆ.ಅರುಣ್ ಕುಮಾರ್, ಬಿ.ಕೆ.ಜಗದೀಶ್, ಮನು ಮುತ್ತಪ್ಪ, ಸವಿತಾ ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು.