ಬೆಲೆ ಏರಿಕೆ ವಿರೋಧಿಸಿ ಮುಂಡರಗಿಯಲ್ಲಿ ಬಿಜೆಪಿ ಪ್ರತಿಭಟನೆ

| Published : Apr 09 2025, 12:34 AM IST

ಸಾರಾಂಶ

ಬೆಲೆ ಏರಿಕೆ, ದಲಿತರ ಹಣ ದುರ್ಬಳಕೆ, ಮುಸ್ಲಿಂ ಶಾಸಕರ ಓಲೈಕೆ, 18 ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಮುಂಡರಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.

ಮುಂಡರಗಿ: ಬೆಲೆ ಏರಿಕೆ, ದಲಿತರ ಹಣ ದುರ್ಬಳಕೆ, ಮುಸ್ಲಿಂ ಶಾಸಕರ ಓಲೈಕೆ, 18 ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಮುಂಡರಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ ಅವರು, ಈ ಹಿಂದೆ ವಿಧಾನಸಭೆ ಪೀಠಾಧ್ಯಕ್ಷರ ಸಂಬಂಧಿಗಳು ಬಂದಾಗ ಅವರನ್ನು ಪೀಠಾಧ್ಯಕ್ಷರೇ ಪೀಠದ ಹತ್ತಿರ ಕರೆದುಕೊಂಡು ಹೋಗಿ ಪೋಟೊ ತೆಗೆಸಿದ್ದಾರೆ. ಅದು ಕಾನೂನು ಬಾಹೀರವಲ್ಲವೆ? ಎಂದು ಪ್ರಶ್ನಿಸಿದರು.

ಇಂದು ನಾವು ಯಾವುದೇ ರೀತಿ ತಪ್ಪನ್ನು ಮಾಡದಿದ್ದರೂ ಸಹ ನಮ್ಮ 18 ಜನ ಶಾಸಕರನ್ನು ಅನರ್ಹರನ್ನಾಗಿ ಮಾಡಿದ್ದು ಖಂಡನೀಯ. ಸಭಾಧ್ಯಕ್ಷರು ಆ ಪೀಠವನ್ನು ತ್ಯಾಗ ಮಾಡಿ ಕೆಳಗಿಳಿಯಬೇಕು. ತಕ್ಷಣವೇ ನಮ್ಮ ಅನರ್ಹತೆಯನ್ನು ಹಿಂಪಡೆಯದಿದ್ದರೆ ಹೈಕೋರ್ಟಿಗೆ ಹೋಗಿ ಕಾನೂನಿನ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಬಾರದೆನ್ನುವ ಆದೇಶವಿದ್ದರೂ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರ ಮಾತು ಕೇಳಿ ಜಾರಿಗೊಳಿಸಿರುವುದು ಕಾನೂನು ಬಾಹಿರ. ಅಲ್ಪಸಂಖ್ಯಾತರಲ್ಲಿ ಅನೇಕ ಜನಾಂಗದವರು ಬರುತ್ತಾರೆ. ಆದರೆ ತಾವು ಕೇವಲ ಮುಸ್ಲಿಂರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮೀಸಲಾತಿ ಜಾರಿಗೊಳಿಸಲು ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾನವಿನಾಳ ಮಾತನಾಡಿ, ವಿದ್ಯುತ್ ದರ, ಬಸ್ ದರ, ಹಾಲಿನ ದರ, ಡೀಸೆಲ್‌ ದರ, ಅಬಕಾರಿ ಸುಂಕ ಸೇರಿದಂತೆ ಅನೇಕ ರೀತಿಯ ವಸ್ತುಗಳ ದರವನ್ನು ಹೆಚ್ಚಿಸಲಾಗಿದೆ ಎಂದು ಟೀಕಿಸಿದರು. ಶಾಸಕ ಲಮಾಣಿಯವರು ಗಲಾಟೆ ಮಾಡಿದ ವಿಡಿಯೋ ಇದ್ದಲ್ಲಿ ತಕ್ಷಣವೇ ಬಿಡುಗಡೆ ಮಾಡಬೇಕು. ಸದನದಲ್ಲಿ ನಿಮ್ಮ ಸರ್ಕಾರದ ಹಾಗೂ ಜಿಲ್ಲೆಯಲ್ಲಿ ನಿಮ್ಮ ಹುಳುಕುಗಳನ್ನು ಬಯಲಿಗೆಳೆದು ಮಾತನಾಡುತ್ತಿರುವುದರಿಂದ ಅವರ ಏಳ್ಗೆಯನ್ನು ಸಹಿಸದೇ ಸ್ವತಃ ಕಾನೂನು ಸಚಿವರೇ ಕೊನೆಯದಾಗಿ ನಮ್ಮ ಶಾಸಕರ ಹೆಸರನ್ನು ಅಮಾನತುಗೊಂಡ ಶಾಸಕರ ಪಟ್ಟಿಯಲ್ಲಿ ಸೇರಿಸಿದ್ದಾರೆ ಎಂದುಆರೋಪಿಸಿದರು.ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ತಲಾ 50ರಂತೆ ಸಬ್ಸಿಡಿ ದರದಲ್ಲಿ ಬಂದಿದ್ದ 160 ಟ್ಯಾಕ್ಸಿಗಳನ್ನು ಗದಗ ಕ್ಷೇತ್ರದಲ್ಲಿಯೇ ಕೊಟ್ಟು ಕೇವಲ 40 ಟ್ಯಾಕ್ಸಿಗಳನ್ನು ಬೇರೆ ಕ್ಷೇತ್ರಗಳಿಗೆ ನೀಡಿದ್ದಾರೆ. ಸಚಿವರೇ ನಿಮಗೆ ಚಂದ್ರು ಲಮಾಣಿಯವರ ಬಗ್ಗೆ ದ್ವೇಷವಿದ್ದರೆ ಅವರೊಬ್ಬರ ಬಗ್ಗೆ ದ್ವೇಷ ಮಾಡಿ ಅದನ್ನು ಬಿಟ್ಟು ಇಡೀ ಕ್ಷೇತ್ರದ ಜನರ ಮೇಲೆ ದ್ವೇಷ ಮಾಡುವುದು ಸರಿಯಲ್ಲ. ಇಂದು ಪ್ರತಿ ಕ್ಷೇತ್ರಕ್ಕೆ 50 ಟ್ಯಾಕ್ಸಿ ಬಂದಿದ್ದರೆ ಅಷ್ಟು ಜನ ಯುವಕರು ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಿದ್ದರು ಎಂದರು.

ಬಿಜೆಪಿ ಮುಖಂಡ ಕೊಟ್ರೇಶ ಅಂಗಡಿ, ಕುಮಾರಸ್ವಾಮಿ ಹಿರೇಮಠ ಮಾತನಾಡಿದರು. ಶಾಸಕ ಡಾ. ಚಂದ್ರು ಲಮಾಣಿ ಅ‍ವರು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತಗೌಡ ಗುಡದಪ್ಪನವರ, ನಾಗೇಶ ಹುಬ್ಬಳ್ಳಿ, ಜ್ಯೋತಿ ಹಾನಗಲ್, ಯಲ್ಲಪ್ಪ ಗಣಾಚಾರಿ, ದೇವಪ್ಪ ಇಟಗಿ, ಯಲ್ಲಪ್ಪ ಗಣಾಚಾರಿ, ಶಿವನಗೌಡ ಗೌಡ್ರ, ಮೈಲಾರಪ್ಪ ಕಲಕೇರಿ, ಚಿನ್ನಪ್ಪ ವಡ್ಡಟ್ಟಿ, ಶ್ರೀನಿವಾಸ ಅಬ್ಬಿಗೇರಿ, ಶಂಕರ ಉಳ್ಳಾಗಡ್ಡಿ, ಶಿವಕುಮಾರ ಕುರಿ, ಭೀಮಣ್ಣ ಆರೇರ್, ಅಶೋಕ ಚೂರಿ, ಬಸನಗೌಡ ಗೌಡ್ರ, ಪವಿತ್ರಾ ಕಲ್ಲಕುಟಗರ್, ಅರುಣಾ ಪಾಟೀಲ, ವೀಣಾ ಬೂದಿಹಾಳ, ರಂಗಪ್ಪ ಕೋಳಿ, ಬಸವರಾಜ ಅಂಕದ, ರಮೇಶ ಹುಳಕಣ್ಣವರ, ಬಸವರಾಜ ಚಿಗಣ್ಣವರ, ಶಿವಪುತ್ರಪ್ಪ ಪೂಜಾರ, ದಾವಲ್ ನಮಾಜಿ ಉಪಸ್ಥಿತರಿದ್ದರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನಿಂದ ಪ್ರಾರಂಭವಾದ ಮೆರವಣಿಗೆ ಅಂಬಾ ಭವಾನಿ ದೇವಸ್ಥಾನದ ರಸ್ತೆ ಮೂಲಕ ಬಜಾರ, ಜಾಗೃತ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ಎದುರಿನ ಗದಗ ಮುಂಡರಗಿ ರಸ್ತೆಗೆ ಬಂದು ಅಲ್ಲಿ ಕೆಲ ಸಮಯ ರಸ್ತೆ ತಡೆ ನಡೆಸಿದರು. ನಂತರ ತಹಸೀಲ್ದಾರ್ ಮನವಿ ಸ್ವೀಕರಿಸಿದರು.