ರಾಜ್ಯ ಬಜೆಟ್ ವಿರೋಧಿಸಿ ಶಿರಸಿಯಲ್ಲಿ ಬಿಜೆಪಿಯಿಂದ ಪ್ರತಿಭಟನೆ

| Published : Mar 09 2025, 01:46 AM IST

ಸಾರಾಂಶ

ಅಭಿವೃದ್ಧಿ ಶೂನ್ಯ ರಾಜ್ಯ ಬಜೆಟ್ ವಿರೋಧಿಸುವ ಜತೆ ಬಜೆಟ್ ನ್ಯೂನತೆ ಸರಿಪಡಿಸುವಂತೆ ಆಗ್ರಹ

ಶಿರಸಿ: ಅಭಿವೃದ್ಧಿ ಶೂನ್ಯ ರಾಜ್ಯ ಬಜೆಟ್ ವಿರೋಧಿಸುವ ಜತೆ ಬಜೆಟ್ ನ್ಯೂನತೆ ಸರಿಪಡಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ನಗರದ ಶಿವಾಜಿಚೌಕದಿಂದ ಸಹಾಯಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ, ಓಲೈಕೆ ರಾಜಕಾರಣದಿಂದ ಹಿಂದುಳಿದ ವರ್ಗಗಳ ಜನರ ಜತೆ ಬಹುಸಂಖ್ಯಾತರಿಗೆ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಅನ್ಯಾಯ ಮಾಡಲಾಗಿದೆ. ಬಜೆಟ್ ನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು. ನಿಖರ ಭರವಸೆ ನೀಡುವ ಯೋಜನೆ ಹಾಗೂ ಅದಕ್ಕೆ ಅನುದಾನ ಪ್ರಕಟಿಸದೇ ಆಕರ್ಷಕ ಕಾರ್ಯಕ್ರಮಗಳನ್ನು ಘೋಷಿಸಿ, ಜನರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ. ಶಿಕ್ಷಣದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯಾವುದೇ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿಗೆ ಅವಕಾಶವಿರುವ ಕೈಗಾರಿಕೆಗಳಿಗೆ ಉತ್ತೇಜನವೇ ಇಲ್ಲ. ವಿಶೇಷವಾಗಿ ಕೃಷಿ ವಲಯಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ರೈತರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ ಎಂದರು.

ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಕರ್ಯದತ್ತ ದೃಷ್ಟಿ ಹರಿಸದೇ ಕೈ ತೊಳೆದುಕೊಳ್ಳಲಾಗಿದೆ. ಸಾಂಸ್ಕೃತಿಕ ವಲಯ ಹಾಗೂ ಪ್ರವಾಸೋದ್ಯಮ ವಿಸ್ತರಿಸುವ ನಿರ್ದಿಷ್ಟವಾದ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಕಟಿಸದೇ ಈ ಕ್ಷೇತ್ರಗಳ ಬೆಳವಣಿಗೆ ಪ್ರೋತ್ಸಾಹ ನೀಡುವ ಪೊಳ್ಳು ಭರವಸೆ ನೀಡಲಾಗಿದೆ. ಪರಿಶಿಷ್ಟ, ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯದವರ ಜಪ ಮಾಡಿ ರಾಜಕೀಯವಾಗಿ ಬೆಳೆದು ಬಂದ ಸಿದ್ದರಾಮಯ್ಯನವರು ಈ ಸಮುದಾಯಗಳ ಏಳಿಗೆಗೆ ಯಾವ ಯೋಜನೆಗಳನ್ನೂ ಪ್ರಕಟಿಸಿಲ್ಲ. ವಿವಿಧ ಹಿಂದುಳಿದ ವರ್ಗಗಳ ನಿಗಮಗಳಿಗೆ ಈ ಹಿಂದಿನ ಬಜೆಟ್ ನಲ್ಲಿ ಘೋಷಣೆಯಾದ ಪೂರ್ಣ ಪ್ರಮಾಣದ ಅನುದಾನವನ್ನೇ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ, ಕೇವಲ ಅಧಿಕಾರಕ್ಕೆ ಬರಲು ಮಾತ್ರ ದಲಿತ, ಹಿಂದುಳಿದವರ ಜಪ ಎಂಬುದನ್ನು ಮತ್ತೊಮ್ಮೆ ಸಿಎಂ ಸಾಬೀತುಪಡಿಸಿದ್ದಾರೆ. ಅಭಿವೃದ್ಧಿಯಲ್ಲಿ ಹಿಂದುಳಿದ ಸಮುದಾಯಗಳ ಕಷ್ಟದ ತಾಪ ಕಡಿಮೆ ಮಾಡುವ ಯಾವುದೇ ಯೋಜನೆ ಪ್ರಕಟಿಸದೇ ಒಬಿಸಿ ಸಮುದಾಯಗಳ ಹಿತಾಸಕ್ತಿಯನ್ನು ಪೂರ್ಣ ಕಡೆಗಣಿಸಲಾಗಿದೆ ಎಂದರು.

ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಕೇವಲ ಕಾಗದದಲ್ಲೇ ಉಳಿಯುವ ಸಾಧ್ಯತೆ ಗೋಚರವಾಗುತ್ತಿದೆ. ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದವೆಲ್ಲವೂ ಘೋಷಣೆಯಾಗಿಯೇ ಉಳಿದಿದೆ. ಹೀಗಾಗಿ ಬಹುಸಂಖ್ಯಾತರ ಭಾವನೆ ಗೌರವಿಸುವ, ಎಲ್ಲರ ಏಳಿಗೆ ಹಾಗೂ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವ ಅಂಶಗಳನ್ನು ಮತ್ತು ರೈತಪರ ನಿಲುವು, ಯೋಜನೆಗಳನ್ನು ಬಜೆಟ್ ಒಳಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹರ್ತೆಬೈಲ್, ಪ್ರಮುಖರಾದ ಆರ್.ಡಿ.ಹೆಗಡೆ, ಸದಾನಂದ ಭಟ್ಟ, ಅನಂತಮೂರ್ತಿ ಹೆಗಡೆ, ಶ್ರೀನಿವಾಸ ಹೆಬ್ಬಾರ್, ಶಿವಾಜಿ ನರಸಾನಿ, ತಿಮ್ಮಪ್ಪ ಮಡಿವಾಳ, ನಂದನ ಸಾಗರ, ಆನಂದ ಸಾಲೇರ, ಶರ್ಮಿಳಾ ಮಾದನಗೇರಿ, ವೀಣಾ ಶೆಟ್ಟಿ, ಶಿಲ್ಪಾ ಭಾಸ್ಕರ್, ರವಿಚಂದ್ರ ಶೆಟ್ಟಿ, ರಮೇಶ ನಾಯ್ಕ, ನಾಗರಾಜ ನಾಯ್ಕ, ಪ್ರೇಮಕುಮಾರ ಮತ್ತಿತರರು ಇದ್ದರು.

ಹಣಕಾಸು ಖಾತೆಯನ್ನು ಹೊತ್ತ ಮುಖ್ಯಮಂತ್ರಿ ಮಂಡಿಸಿರುವ ರಾಜ್ಯದ ಬಜೆಟ್ ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸಲು ಒತ್ತು ನೀಡಿದ್ದನ್ನು ಬಿಜೆಪಿ ಖಂಡಿಸುತ್ತದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ.