ಸಾರಾಂಶ
ಯೂರಿಯಾ ಅಭಾವ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸಿರುಗುಪ್ಪ
ಯೂರಿಯಾ ಅಭಾವ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಯೂರಿಯಾ ಸಮಸ್ಯೆ ತಲೆದೂರಿದೆ. ಮೂರು ತಿಂಗಳ ಮೊದಲೇ ಸರ್ಕಾರ ಮುಂಜಾಗ್ರತೆ ವಹಿಸಬೇಕಾಗಿತ್ತು. ಆದರೆ, ರೈತರ ಹಿತ ಕಾಯುವ ಯಾವುದೇ ಕಾಳಜಿಯಿಲ್ಲದ ಸರ್ಕಾರದ ಧೋರಣೆಯಿಂದಾಗಿ ಇಡೀ ರೈತ ಸಮುದಾಯ ಸಂಕಷ್ಟಕ್ಕೀಡಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಇಲ್ಲಿನ ಬಿಜೆಪಿ ತಾಲೂಕು ಕಚೇರಿಯಿಂದ ಮೆರವಣೆಗೆ ಹೊರಟ ಪ್ರತಿಭಟನಾಕಾರರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾತನಾಡಿ, ಯೂರಿಯಾ ಅಭಾವದಿಂದ ರೈತರ ಮೇಲಾಗಿರುವ ಪರಿಣಾಮ ಕುರಿತು ತಿಳಿಸಿದರಲ್ಲದೆ, ಸರ್ಕಾರ ಕೂಡಲೇ ಅಗತ್ಯದಷ್ಟು ರಸಗೊಬ್ಬರ ಪೂರೈಕೆಗೆ ಕ್ರಮ ವಹಿಸಬೇಕು. ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುವುದನ್ನು ತಪ್ಪಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ಮುಖಂಡರಾದ ಶಿವರಾಮ ಗೌಡ, ಮೇಕೆಲಿ ವೀರೇಶ್, ಮೋಹನ್ ರೆಡ್ಡಿ, ಮಹಾದೇವ್, ನಟರಾಜ್, ವಿಕ್ರಮ ಜೈನ್, ಈರಣ್ಣ ಬಸವರಾಜ, ಶ್ರೀಧರ, ಹೊನ್ನಪ್ಪ, ಅಯ್ಯಪ್ಪ ರಾಜಶೇಖರ ಗೌಡ ಮತ್ತಿತರರು ಭಾಗವಹಿಸಿದ್ದರು. ಪಕ್ಷದ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಗಾಂಧಿ ವೃತ್ತದವರೆಗೆ ತಲುಪಿ ಸಮಾವೇಶಗೊಂಡಿತು.