ಸಾರಾಂಶ
- ಚಿಕ್ಕಮಗಳೂರು ನಗರಸಭೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಡವರಿಗೆ ಆಶ್ರಯ ಮನೆಗಳು ನೀಡುವಲ್ಲಿ ರಾಜ್ಯ ಸರ್ಕಾರ ವಿಫಲ ಹಾಗೂ ಅರ್ಹ ಫಲಾನುಭವಿಗಳ ವೃದ್ಧಾಪ್ಯ ವೇತನ ರದ್ದು ಮಾಡಿರುವುದನ್ನು ಖಂಡಿಸಿ ಬಿಜೆಪಿ ನಗರ ಮಂಡಲದಿಂದ ಶನಿವಾರ ಕಾರ್ಯಕರ್ತರು ನಗರಸಭಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ದೀನದಲಿತರು, ಬಡವರು ಹಾಗೂ ರೈತ ವಿರೋಧಿ ನೀತಿ ಆಡಳಿತವನ್ನು ನೀಡುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ಥಿತಿಗೆ ತಂದಿದೆ ಎಂದರು.ರಾಜ್ಯದ ಜನತೆ ದಿನನಿತ್ಯ ಬಳಸುವ ವಸ್ತುಗಳನ್ನು ಬೆಲೆ ಏರಿಸುವ ಮೂಲಕ ಗಾಯದ ಮೇಲೆ ಎಳೆಯುತ್ತಿದೆ. ಪೆಟ್ರೋಲ್, ಡೀಸೆಲ್, ಪಹಣಿ, ಛಾಪಾಕಾಗದ, ಕಂದಾಯ ಮುದ್ರಾಂಕ ಶುಲ್ಕ, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ಕಷ್ಟವಾಗಿದೆ ಎಂದು ತಿಳಿಸಿದರು.
ಕ್ಷೇತ್ರದ ಹಿಂದಿನ ಶಾಸಕರ ಆಡಳಿತ ಅವಧಿಯಲ್ಲಿ ಆಶ್ರಯ ಯೋಜನೆ, ಅಂಬೇಡ್ಕರ್ ಅವಾಸ್ ಯೋಜನೆ, ಪಿಎಂ ಆವಾಸ್ ಯೋಜನೆ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕೈಗೊಂಡ ಯೋಜನೆಗಳು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಸಂಪೂರ್ಣ ನೆನೆಗುದಿಗೆ ಬಿದ್ದಿವೆ ಎಂದು ಆರೋಪಿಸಿದರು.ನಗರಸಭೆ ವ್ಯಾಪ್ತಿಯಲ್ಲಿ ಬಡತನ ರೇಖೆ ಕೆಳಗಿರುವ ಅರ್ಹ ಫಲಾನುಭವಿಗಳಿಗೆ ಆಶ್ರಯ, ಅಂಬೇಡ್ಕರ್ ಆವಾಜ್ ಯೋಜನೆಗಳಡಿ ಮನೆಗಳನ್ನು ಮಂಜೂರು ಮಾಡುವ ಜೊತೆಗೆ ಇದಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆ ಗೊಳಿಸಬೇಕು. 70 ವರ್ಷ ಮೇಲ್ಪಟ್ಟ ಎಲ್ಲಾ ವರ್ಗದವರಿಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ ಜಾರಿಗೊಳಿಸಬೇಕು ಎಂದರು.
ಪ್ರಸ್ತುತ ಸಂಧ್ಯಾ ಸುರಕ್ಷಾ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಜಿಲ್ಲೆಯ 46 ಸಾವಿರಕ್ಕೂ ಅಧಿಕ ಅರ್ಹ ಫಲಾನುಭವಿಗಳ ವೃದ್ಧಾಪ್ಯ ವೇತನ ರದ್ದುಪಡಿಸಲಾಗಿದೆ. ಕೂಡಲೇ ಈ ಕ್ರಮ ಕೈಬಿಡಬೇಕು. 94ಸಿ ಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು ಎಂದರು.ವಿವಿಧ ಫಲಾನುಭವಿಗಳು ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೀಡಿದ ಮನೆಗಳಿಗೆ ಕಾಂಗ್ರೆಸ್ ಸರ್ಕಾರ ಅನುದಾನ ನೀಡದಿರುವ ಕಾರಣ ಕೆಲಸ ಪ್ರಾರಂಭಿಸಿಲ್ಲ. ಅಕ್ಕಿ, ರಾಗಿ ಉಚಿತವಾಗಿ ವಿತರಿಸುತ್ತಿದೆ. ಆದರೆ ಆಹಾರ ಪದಾರ್ಥಗಳ ಬೆಲೆಗಳು ಹೆಚ್ಚಳಗೊಂಡಿದ್ದು ಇದರಿಂದ ಬಡವರ ಕುಟುಂಬ ಕಂಗಾಲಾಗಿವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುತ್ತಯ್ಯ, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಸದಸ್ಯರಾದ ದೀಪ ರವಿಕುಮಾರ್, ರೂಪಾ ಕುಮಾರ್, ಲಲಿತಾ ಬಾಯಿ, ಅಮೃತೇಶ್, ಮಣಿ, ರಾಜು, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್ ಕುಮಾರ್, ಪವಿತ್ರ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸಚಿನ್ ಹಾಗೂ ಕಾರ್ಯಕರ್ತರು ಇದ್ದರು. 19 ಕೆಸಿಕೆಎಂ 1ಬಡವರಿಗೆ ಆಶ್ರಯ ಮನೆಗಳು ನೀಡುವಲ್ಲಿ ರಾಜ್ಯ ಸರ್ಕಾರ ವಿಫಲ ಹಾಗೂ ಅರ್ಹ ಫಲಾನುಭವಿಗಳ ವೃದ್ದಾಪ್ಯ ವೇತನ ರದ್ದು ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಚಿಕ್ಕಮಗಳೂರು ನಗರಸಭಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.