ಸಾರಾಂಶ
ಕೆಲ ವಾರಗಳಿಂದ ರಾಜ್ಯದಲ್ಲಿ ಕರಾಳ ದಿನಗಳು ಸಂಭವಿಸುತ್ತಿದ್ದು, ಸರಿಯಾದ ಚಿಕಿತ್ಸೆ ಸಿಗದೇ ಹಾಗೂ ನಿರ್ಲಕ್ಷ್ಯದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ೨೧೭ಕ್ಕೂ ಹೆಚ್ಚು ಬಾಣಂತಿಯರ ಸಾವು ಆಗಿದ್ದು, ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟ ಕುಟುಂಬ ಮತ್ತು ಕಲ್ಯಾಣ ಇಲಾಖೆ ಸಚಿವ ಮತ್ತು ಆರೋಗ್ಯ ಇಲಾಖೆ ಸೇರಿ ಇಬ್ಬರೂ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ
ಕೆಲ ವಾರಗಳಿಂದ ರಾಜ್ಯದಲ್ಲಿ ಕರಾಳ ದಿನಗಳು ಸಂಭವಿಸುತ್ತಿದ್ದು, ಸರಿಯಾದ ಚಿಕಿತ್ಸೆ ಸಿಗದೇ ಹಾಗೂ ನಿರ್ಲಕ್ಷ್ಯದಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ೨೧೭ಕ್ಕೂ ಹೆಚ್ಚು ಬಾಣಂತಿಯರ ಸಾವು ಆಗಿದ್ದು, ಸರ್ಕಾರ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸಂಬಂಧಪಟ್ಟ ಕುಟುಂಬ ಮತ್ತು ಕಲ್ಯಾಣ ಇಲಾಖೆ ಸಚಿವ ಮತ್ತು ಆರೋಗ್ಯ ಇಲಾಖೆ ಸೇರಿ ಇಬ್ಬರೂ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವಂತೆ ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮತ್ತು ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿಯರ ವ್ಯಾಪಕ ಸಾವಿನ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸುವರ್ಣಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದು, ಬಂಧನಕ್ಕೂ ಒಳಗಾಗಿ ಅನೇಕ ಬೇಡಿಕೆಗಳಿಗಾಗಿ ಒತ್ತಾಯಿಸಿರುತ್ತದೆ. ಸದನದ ಒಳಗೆ ಪ್ರತಿಪಕ್ಷವಾಗಿ ಬಿಜೆಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈಫಲ್ಯಗಳ ಮೇಲೆ ಅನೇಕ ದಿನಗಳ ಚರ್ಚೆ ನಡೆಸಿತ್ತು. ನಂತರವೂ ಬಾಣಂತಿಯರ ಸಾವು ಮುಂದುವರಿದಿದೆ. ಆದ್ದರಿಂದ ರಾಜ್ಯ ಮಹಿಳಾ ಮೋರ್ಚಾ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದೆ ಎಂದರು.ಪ್ರಮುಖ ಬೇಡಿಕೆಗಳೆಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ ಬಾಣಂತಿಯರಿಗೆ ೨೫ ಲಕ್ಷ ರು. ಪರಿಹಾರ ನೀಡಬೇಕು. ಸಾವನ್ನಪ್ಪಿದ ಬಾಣಂತಿಯರ ಅನಾಥ ಮಕ್ಕಳ ಭವಿಷ್ಯ ರೂಪಿಸಲು ಸರ್ಕಾರ ಆ ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು. ಇದಕ್ಕಾಗಿ ಕೂಡಲೇ ಸರ್ಕಾರ ನಿಯಮವನ್ನು ರೂಪಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ವ್ಯಾಪಕ ಸಾವುಗಳನ್ನು ತಡೆಯಲು ವಿಫಲರಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ರಾಜೀನಾಮೆ ನೀಡಬೇಕು. ಬಾಣಂತಿಯರ ಸಾವಿಗೆ ನೈಜ ಕಾರಣಗಳನ್ನು ತಿಳಿದು ಅದನ್ನು ನಿಯಂತ್ರಿಸಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ, ಬೆಳಗಾವಿ, ತಿಪಟೂರು, ಬೆಂಗಳೂರು, ಕೊಪ್ಪಳ, ರಾಯಚೂರು, ಕಲ್ಬುರ್ಗಿಯಿಂದ ಬರುತ್ತಿರುವ ವರದಿಗಳ ಪ್ರಕಾರ ಈ ಸಾವುಗಳಿಗೆ ಕಾರಣವೇನೆಂದರೆ, ಸರ್ಕಾರ ಬಳಸುತ್ತಿರುವ ಕಳಪೆ ಗುಣಮಟ್ಟದ ಔಷಧಿಗಳು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ದೂರಿದರು. ಗರ್ಭಿಣಿ ಸ್ತ್ರೀಯರ ಆರೈಕೆಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನನಿ ಶಿಶು ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ. ಪ್ರಧಾನಮಂತ್ರಿ ಸುರಕ ಮಾತ್ರತ್ವ ಅಭಿಯಾನ, ಸುರಕ್ಷಿತ್ ಮಾತ್ರತ್ವ ಆಶ್ವಾಸನ್, ಲಕ್ಷ, ಪ್ರಧಾನ ಮಂತ್ರಿ ಮಾತೃವಂದನ ಯೋಜನೆ, ಅನಿಮಿಯ ಅಂಡ್ ಚೈಲ್ಡ್ ಪ್ರೊಟೆಕ್ಷನ್ ಕಾರ್ಡ್ ಪೋಷಣ್ ಅಭಿಯಾನ್, ರಾಷ್ಟ್ರೀಯ ಬಾಲ್ ಸ್ವಾಸ್ಥ್ಯ ಕಾiಕ್ರಮ ಬಾಣಾಂತಿಯರಿಗೆ ಪೋಷನ್ ಅಭಿಯಾನ್, ಜನನಿ ಸುರಕ್ಷಾ ಯೋಜನೆ, ಆಹಾರದ ಕಿಟ್, ಕ್ಯಾಲ್ಸಿಯಂ, ಪ್ರೊಟೀನ್, ನಾದಂತಹ ಸಾಮಾಗ್ರಿಗಳನ್ನು ನೀಡುವುದು. ನಿಯಮಿತ ತಪಾಸಣೆ ನಡೆಸುವುದು ಹಾಗೂ ಮಾತ್ರವಂದನ ಯೋಜನೆಯ ಹಣ ತಲುಪಿಸುವುದರಲ್ಲಿ ರಾಜ್ಯ ಸರ್ಕಾರದ ಎರಡು ಇಲಾಖೆಗಳು ವಿಫಲವಾಗಿವೆ. ಈ ಕುರಿತು ನಿಷ್ಪಕ್ಷವಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೂ ಕರ್ನಾಟಕ ರಾಜ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸರ್ಕಾರದ ಹೊಣೆಗೇಡಿತನದಿಂದ ಸಂಪೂರ್ಣ ಹದಗೆಟ್ಟಿದೆ. ಸಿಬ್ಬಂದಿಯ ಕೊರತೆಯಿಂದ ಪಿಎಚ್‌ಸಿಗಳು ಸೊರಗುತ್ತಿದೆ. ಆ್ಯಂಬುಲೆನ್ಸ್‌ಗಳಿಗೆ ಸರಿಯಾಗಿ ಡೀಸೆಲ್ ಸಿಗುತ್ತಿಲ್ಲ. ಚಾಲಕರುಗಳಿಗೆ ಸರ್ಕಾರ ಸಂಬಳ ನೀಡುತ್ತಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಐಸಿಯು, ಬ್ಲಡ್ ಬ್ಯಾಂಕ್ ಕೊರತೆ ಇದ್ದು, ಸರಕಾರವು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರಕಾರಿ ಆಸ್ಪತ್ರೆಗಳ ವ್ಯವಸ್ಥೆಯನ್ನು ಪರಿಶೀಲಿಸಿ ಸುವ್ಯವಸ್ಥಿತಗೊಳಿಸಬೇಕು. ಹಾಗೂ ಮೇಲ್ದರ್ಜೆಗೇರಿಸಬೇಕು ಎಂದು ಇದೇ ವೇಳೆ ಆಗ್ರಹ ವ್ಯಕ್ತಪಡಿಸಿದರು. ಪ್ರತಿಭಟನೆ ಆರಂಭದಲ್ಲಿ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ನಂತರ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಬಿ.ಎಚ್. ನಾರಾಯಣಗೌಡ, ಯೋಗೀಶ್, ಸುಷ್ಮಾ ಕಾಂತರಾಜು, ವನಜಾಕ್ಷಿ, ವಿಜಯಲಕ್ಷ್ಮಿ ಅಂಜನಪ್ಪ, ಶೋಭಾ ಗಣೇಶ್, ಇಂದಿರಾ ನಾಗರಾಜು, ಸಂಗೀತಾ, ಇತರರು ಉಪಸ್ಥಿತರಿದ್ದರು.