ಹಾವೇರಿ: ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಕೂಡಲೇ ಘೋಷಣೆ ಮಾಡಬೇಕು ಹಾಗೂ ಬೆಳೆ ಹಾನಿ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತ ಕಚೇರಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರೈತರ ಪಂಪಸೆಟ್‌ಗಳಿಗೆ ಷರತ್ತು ರಹಿತವಾಗಿ ವಿದ್ಯುತ್ ಸಂಪರ್ಕ, ಬೆಳೆ ವಿಮೆಯಲ್ಲಿನ ಗೊಂದಲ ನಿವಾರಣೆ, ಜಿಲ್ಲೆಯಲ್ಲಿನ ಎಲ್ಲಾ ಕೆರೆ ತುಂಬಿಸುವ ಕೆಲಸವಾಗಬೇಕು. ರಸಗೊಬ್ಬರ ಪೂರೈಕೆಯಲ್ಲಿ ವಿಳಂಬವಾಗುತ್ತಿದ್ದು ಸಕಾಲಕ್ಕೆ ಅಗತ್ಯವಾದ ಗೊಬ್ಬರ ಸಿಗುತ್ತಿಲ್ಲ ಎಂದು ದೂರಿದರು. ಅಸುಂಡಿ ಮತ್ತು ಆಣೂರು ಏತ ನೀರಾವರಿ ಯೋಜನೆ ಕಾಮಗಾರಿ ವಿಳಂಬವಾಗುತ್ತಿದ್ದು ಕೂಡಲೇ ಅವುಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದರು. ಅಲ್ಲದೇ ಇನ್ನೂ ಹತ್ತು ಹಲವಾರು ರೈತರ ಸಮಸ್ಯೆಗಳಿದ್ದು, ಈ ಕುರಿತು ಸರ್ಕಾರವು ನಿರ್ಲಕ್ಷ್ಯ ಧೋರಣೆಯನ್ನು ಹೊಂದಿದೆ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಂಗಾಧರ ಬಾಣದ, ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ರಾಮಣ್ಣ ಮಾಳಗಿ, ಹಾವೇರಿ ನಗರ ಮಂಡಲ ಅಧ್ಯಕ್ಷ ಕಿರಣ ಕೊಳ್ಳಿ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಜಗದೀಶ್ವರಗೌಡ ಲಕ್ಕನಗೌಡ್ರ, ಮೃತ್ಯುಂಜಯ ಮುಷ್ಠಿ, ಹನುಮಂತಗೌಡ ಮುದಿಗೌಡ್ರ, ಜಿಲ್ಲಾ ರೈತ ಮೋರ್ಚಾ ಪ್ರಧಾನಕಾರ್ಯದರ್ಶಿ ಪರಮೇಶಪ್ಪ ಗುಳಣ್ಣನವರ, ಸುರೇಶ ದ್ಯಾವಕ್ಕಳವರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಮಾಧ್ಯಮ ಸಂಚಾಲಕ ವಿಜಯಕುಮಾರ ಚಿನ್ನಿಕಟ್ಟಿ, ಜಿಲ್ಲಾ ರೈತ ಮೋರ್ಚಾ ಕಾರ್ಯಾಲಯ ಕಾರ್ಯದರ್ಶಿ ಮಂಜುನಾಥ ತಾಂಡೂರ, ಮಂಡಲ ಅಧ್ಯಕ್ಷ ಕರಿಯಪ್ಪಗೌಡ ಪಾಟೀಲ, ಅಜ್ಜಯ್ಯಸ್ವಾಮಿ ಆರಾಧ್ಯಮಠ, ಶಿವಪುತ್ರಪ್ಪ ಕಲಕೋಟಿ, ಜಿಲ್ಲಾ ಸದಸ್ಯರಾದ ಚನ್ನಬಸಪ್ಪ ಬಣಕಾರ, ಪ್ರಮುಖರಾದ ಲಾಲಸಾಬ ಹೊಂಬರಡಿ, ಶ್ರೀನಿವಾಸ ಗಿತ್ತೆ ಮತ್ತು ಎಲ್ಲಾ ರೈತ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.